

ಗುಂಡ್ಲುಪೇಟೆ: ಆಷಾಢ ಅಮಾವಾಸ್ಯೆ ಅಂಗವಾಗಿ ತಾಲೂಕಿನ ನಾನಾ ದೇವಾಲಯಗಳು ಹಾಗೂ ಮಠಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ಮಣ್ಣೆತ್ತಿ ಅಮಾವಾಸ್ಯೆ ಅಂಗವಾಗಿ ತಾಲೂಕಿನ ತ್ರಿಯಂಭಕಪುರ ಗ್ರಾಮದಲ್ಲಿ ತ್ರಿಯಂಭಕೇಶ್ವರಸ್ವಾಮಿ ಅವರ ಶಿವಲಿಂಗಕ್ಕೆ ನಾನಾ ವಿಧದ ಪುಷ್ಪಗಳಿಂದ ಹಾಗೂ ಅಮ್ಮನವರ ವಿಗ್ರಹಕ್ಕೆ ನೂತನ ಸೀರೆ, ಬಳೆಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಪ್ರಧಾನ ಅರ್ಚಕ ನಾಗೇಂದ್ರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಶಿವಲಿಂಗಕ್ಕೆ ಗರಿಕೆಯಿಂದ ಅಲಂಕಾರ ಮಾಡಲಾಗಿದ್ದು, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ತಾಲೂಕಿನ ಪಡಗೂರು ಅಡವಿಮಠದಲ್ಲಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಮಠಾಧ್ಯಕ್ಷ ಶಿವಲಿಂಗೇಂದ್ರ ಸ್ವಾಮೀಜಿ ಪೂಜೆ ಸಲ್ಲಿಸಿ ಶ್ರೀ ಮದ್ದಾನೇಶ್ವರರ ಮೂಲ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರತಿ ಮಾಡಿದರು. ಈ ಅಂಗವಾಗಿ ಮಠಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಪ್ರತಿ ವರ್ಷದಂತೆ ಬರಟಹಳ್ಳಿ ಗ್ರಾಮಸ್ಥರು ತಾಲೂಕಿನ ಮೂಡಗೂರು ಮಠಕ್ಕೆ ತೆರಳಿ ಮಠಾಧೀಶ ಉದ್ದಾನ ಸ್ವಾಮೀಜಿ ಅವರ ನೇತೃತ್ವದಲ್ಲಿ ಮೂಲಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರು ಮತ್ತು ಭಕ್ತರು ಅಡುಗೆ ತಯಾರಿಸಿ ಪ್ರಸಾದ ಸೇವನೆ ಮಾಡಿದರು.