

ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಕಾಗನೂರು ಗ್ರಾಮದ ಸಮೀಪದಲ್ಲಿರುವ ಹೇಮಾವತಿ ನದಿ ತೀರದಲ್ಲಿ ಇತ್ತೀಚೆಗೆ ಗುರುತಿಸಲ್ಪಟ್ಟ ಶ್ರೀರಾಮನ ಪಾದಗಳಿರುವ (ಪಾದಾರೆಕಲ್ಲು) ಬಂಡೆಗೆ ಸೋಮವಾರ ವಿಶೇಷ ಪೂಜೆಗಳು ಜರುಗಿದವು.
ಅಯೋಧ್ಯೆಯಲ್ಲಿ ಶ್ರೀ ಬಾಲರಾಮರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ಹೊರ ರಾಜ್ಯಗಳು ಸೇರಿದಂತೆ ಮೊದಲಾದ ಕಡೆಗಳಿಂದ ಭಕ್ತರು ಕಾಗನೂರು ಗ್ರಾಮಕ್ಕೆ ಭೇಟಿ ನೀಡಿ ಬಂಡೆಯನ್ನು ಪೂಜಿಸಿ ಪ್ರದಕ್ಷಿಣೆ ಹಾಕಿ ಭಕ್ತಿ ಮೆರೆದರು. ಸಮೀಪದಲ್ಲಿರುವ ಆಂಜನೇಯ ದೇವರಿಗೂ ಮಹಾಮಂಗಳಾರತಿ ಬೆಳಗಿ ತೀರ್ಥಪ್ರಸಾದ ವಿತರಿಸಲಾಯಿತು.
ಕಾಗನೂರು ಗ್ರಾಮದ ಆಂಜನೇಯ ದೇವಾಲಯದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಹೇಮಾವತಿ ನದಿ ತೀರದಲ್ಲಿ ‘ಪಾದಾರೆಕಲ್ಲು’ ಎಂಬ ಸ್ಥಳವಿದ್ದು, ಅಲ್ಲಿ ರಾಮನ ಪಾದಗಳು ಗೋಚರವಾಗಿವೆ. ಈ ಸ್ಥಳದಲ್ಲಿ ಈಶ್ವರ ಲಿಂಗ ಜತೆಯಾಗಿರುವ ಎರಡು ಪಾದಗಳು, ಮಸುಕಾಗಿ ಕಾಣುವ ಮತ್ತೊಂದು ದೊಡ್ಡ ಪಾದ, ತ್ರಿಕೋನಾಕೃತಿಯ ಪಗಡೆ ಹಾಸಿನಂತಹ ಆಕೃತಿ ಒಂದೇ ಬಂಡೆಯ ಮೇಲೆ ಮೂಡಿವೆ. ಶ್ರೀ ರಾಮಸೀತೆಯ ವನವಾಸ ಸಂದರ್ಭದಲ್ಲಿ ಈ ಗ್ರಾಮದ ಮೂಲಕ ಸಂಚಾರ ನಡೆಸಿದ್ದರು. ಆ ಸಂದರ್ಭದಲ್ಲಿ ಇಲ್ಲಿ ಶಿವಲಿಂಗ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದರು ಎಂಬುದಕ್ಕೆ ಕಲ್ಲು ಬಂಡೆ ಮೇಲೆ ಸಿಕ್ಕಿರುವ ಶಿವಲಿಂಗ ಸಾಕ್ಷಿಯಾಗಿದೆ. ಆದ್ದರಿಂದ ಶ್ರೀರಾಮನಿಂದ ಪೂಜಿಸಲ್ಪಟ್ಟ ಈಶ್ವರ ಲಿಂಗಕ್ಕೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪಾಯಸ ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ಬೆಳಗಲಾಯಿತು. ಅರ್ಚಕ ಶ್ರೀ ರಾಜು ಮಹಾಮಂಗಳಾರತಿ ಬೆಳಗಿದ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಿದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.