

ನಂಜನಗೂಡು: ಉಗ್ರಗಾಮಿಗಳನ್ನು ಸಲಹುತ್ತಿರುವ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಮುಂದಾಗಿರುವ ಭಾರತದ ಸೈನಿಕರಿಗೆ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಆತ್ಮಸ್ಥೈರ್ಯ ಹಾಗೂ ಶಕ್ತಿಯನ್ನು ಕರುಣಿಸುವಂತೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದ ವತಿಯಿಂದ ಬುದ್ಧ ಪೂರ್ಣಿಮೆ ವಿಶೇಷ ದಿನವಾದ ಸೋಮವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತೆಯರು ಸಾಮೂಹಿಕವಾಗಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಜತೆಗೆ ಭಾರತೀಯ ಸೈನಿಕರಿಗೆ ಭಗವಂತನ ಕೃಪೆ ಇರಲಿ ಎಂದು ಪ್ರಾರ್ಥಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದಿನಿ ಮಹೇಶ್, ಉಗ್ರಗಾಮಿಗಳನ್ನು ಪೋಷಿಸುತ್ತಿರುವ ಪಾಕಿಸ್ತಾನ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡು ಭಾರತೀಯ ತಾಳ್ಮೆಯನ್ನು ಕೆಣಕಿದೆ. ಅವರಿಗೆ ತಕ್ಕ ಶಾಸ್ತಿ ಮಾಡುವ ನಿಟ್ಟಿನಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನದ ಉಗ್ರವಾದಿಗಳ ಅಡಗುತಾಣಗಳನ್ನು ಧ್ವಂಸ ಮಾಡುವ ಮೂಲಕ ಪ್ರತೀಕಾರಕ್ಕೆ ಮುಂದಾಗಿದ್ದಾರೆ. ಇಂತಹ ಯುದ್ಧದ ಪರಿಸ್ಥಿತಿಯಲ್ಲಿ ಸೈನಿಕರಿಗೆ ಭಗವಂತನ ಕೃಪಾಕಟಾಕ್ಷವಿರಲಿ. ಜತೆಗೆ ಎದುರಾಳಿಗಳನ್ನು ಬಗ್ಗು ಬಡೆಯುವ ನಿಟ್ಟಿನಲ್ಲಿ ನಮ್ಮ ಸೈನಿಕರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶ್ರೀಕಂಠೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಗೌಡ, ನಗರಸಭಾ ಸದಸ್ಯ ಮಹದೇವ್ ಪ್ರಸಾದ್, ಮಂಜುಳಾ, ಪುಷ್ಪಲತಾ, ಗೀತಾ, ಲಕ್ಷ್ಮೀ ಅಂಬುಜಾ, ಶ್ವೇತಾ, ಅಶ್ವಿನಿ, ಮಧುರಾಜ್, ಸಿದ್ದು ಸೇರಿದಂತೆ ಇತರರಿದ್ದರು.