ನಾಗರ ಕಲ್ಲಿಗೆ ವಿಶೇಷ ಪೂಜೆ

Special worship to Nagar Kalli
Special worship to Nagar Kalli in vijayapura
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಗಣೇಶ ಚತುರ್ಥಿ ಪ್ರಯುಕ್ತ ಪಟ್ಟಣದೆಲ್ಲೆಡೆ ಹಲವು ವಿನಾಯಕ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಹಾಗೆಯೇ, ಪಟ್ಟಣದ ನೂರಾರು ಕಡೆ ಸಂಘ-ಸಂಸ್ಥೆಗಳು ವಿನಾಯಕನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದವು.
ಪಟ್ಟಣದ ಹಳೇ ಪುರಸಭೆ ಮುಂಭಾಗದ ಅಶ್ವತ್ಥಕಟ್ಟೆ ಹಾಗೂ ನಾಗರಕಲ್ಲು, ನಾಗರಕೆರೆ ಸಮೀಪದ ನಾಗರಕಲ್ಲು, ಅಶೋಕ ನಗರದಲ್ಲಿನ ನಾಗರಕಲ್ಲು ಮತ್ತಿತರೆಡೆ ನಾಗರಕಲ್ಲುಗಳಿಗೆ ಹುತ್ತಗಳಿಗೆ ಪೂಜೆ ಸಲ್ಲಿಸಿ, ಹಾಲೆರೆದ ಬಳಿಕ ಮನೆಗಳಲ್ಲಿ ಸಿಹಿ ಹಾಗೂ ಕಡುಬುಗಳ ಔತಣ ನಡೆಸಿದರು.
ಪಟ್ಟಣದ ಗಾಂಧಿ ಚೌಕದಲ್ಲಿನ ಅಯೋಧ್ಯಾನಗರ ಶಿವಾಚಾರವೈಶ್ಯ ನಗರ್ತ ಅಸ್ಥಾನ ಭವನದಲ್ಲಿ ಶ್ರೀವಿನಾಯಕ ಭಕ್ತ ಮಂಡಳಿಯಿಂದ 88ನೇ ಗಣೇಶೋತ್ಸವ ಏರ್ಪಡಿಸಲಾಗಿತ್ತು. ಪಟ್ಟಣದ 1ನೇ ವಾರ್ಡ್‌ನ ಅಶೋಕ ನಗರದಲ್ಲಿನ ಚೈತನ್ಯ ವಿನಾಯಕ ಯುವಕರ ಬಳಗವು ಸರ್ಕಾರಿ ಕಿರಿಯ ಕಾಲೇಜಿನ ಆಟದ ಮೈದಾನದಲ್ಲಿ, ಮಾರ್ಕೆಟ್ ರಸ್ತೆಯಲ್ಲಿ, ಗುರಪ್ಪನ ಮಠದ ಓಂಕಾರೇಶ್ವರ ಸ್ವಾಮಿ ದೇವಾಲಯದಲ್ಲಿ, ಕೋಟೆ ಬೀದಿಯ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ, ನವಗ್ರಹ ವೃತ್ತದ ಸಮೀಪ, ಸಂತೆ ಬೀದಿಯ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ, ಬಸವೇಶ್ವರ ನಗರದ ಶ್ರೀ ವಿಜಯ ವಿನಾಯಕಸ್ವಾಮಿ ದೇವಾಲಯದಲ್ಲಿ, ಹೀಗೆ ಪಟ್ಟಣದೆಲ್ಲೆಡೆ ವಿವಿಧ ಆಕಾರಗಳ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 3ದಿನಗಳಿಂದ 15 ದಿನಗಳ ಕಾಲ ದೇವರಿಗೆ ವಿಶೇಷ ಪೂಜೆ ಜತೆಗೆ ಹಲವೆಡೆ ಹರಿಕಥೆ, ಗೀತಾಗಾಯನ, ವೇಷ, ಭೂಷಣ, ಸಂಗೀತ ಸಂಜೆ, ಜಾನಪದ ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net