

ರೇವತಗಾಂವ: ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯ ಐದನೇ ದಿನ ಸೋಮವಾರ ನಾಗರಪಂಚಮಿ ಹಬ್ಬವನ್ನು ರೇವತಗಾಂವ ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದಲ್ಲಿರುವ ನಾಗದೇವತೆ ಹುತ್ತಕ್ಕೆ ಮಹಿಳೆಯರು ವಿಶೇಷವಾಗಿ ಪೂಜೆ ಸಲ್ಲಿಸಿದರು. ನಾಗದೇವತೆಗೆ ಆರತಿ ಬೆಳಗಿ, ಹಾಲೆರೆದು ಐದೆಳೆ ದಾರದ ನೂಲು ಸುತ್ತಿ, ತಮ್ಮ ಕೊರಳಲ್ಲಿ ಧರಿಸಿದರು.
ಇನ್ನೂ ಕೆಲವರು ತಮ್ಮ ಮನೆಯ ಜಗುಲಿ ಮೇಲೆ ನಾಗದೇವತೆ ಪ್ರತಿಷ್ಠಾಪಿಸಿ ಹಾಲೆರೆದು ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ನಂತರ ಮಹಿಳೆಯರು, ಕಿರಿಯರು ಹಾಗೂ ವಯೋವೃದ್ಧರೂ ಜೋಕಾಲಿ ಹಾಗೂ ಪೂಗಾಡಿ ಆಟವಾಡಿ ಸಂಭ್ರಮಿಸಿದರು. ಮಲಕಾರಿಸಿದ್ಧನ ದೇವಸ್ಥಾನದಲ್ಲಿ ಗ್ರಾಮದ ಕಲಾ ತಂಡಗಳಿಂದ ಡೊಳ್ಳಿನ ಪದಗಳು ನಡೆದವು.
ಗ್ರಾಮದ ಯುವಕರು ನಿಂಬೆ ಹಣ್ಣು ಎಸೆಯುವ, ಕಬಡ್ಡಿ, ಚಕ್ರಗಾಣ ಹಾಗೂ ತೂರಮನೆ ಹಾಗೂ ಇತರ ಆಟಗಳನ್ನು ಆಡಿ ಸಂಭ್ರಮಿಸಿದರು.
ಗ್ರಾಪಂ ಸದಸ್ಯೆ ಲಕ್ಷ್ಮೀಬಾಯಿ ಮಾಳಿ ಮಾತನಾಡಿ, ನಾಗರಪಂಚಮಿ ಹಬ್ಬದ ವೇಳೆಯಲ್ಲಿ ಕೃಷಿ ಚಟುವಟಿಕೆ ಒಂದು ಹಂತ ತಲುಪಿರುತ್ತವೆ. ಕೀಟ, ಮಿಡತೆಗಳು ಹಾಗೂ ಸಲು ತಿನ್ನಲು ಬರುವ ಇಲಿಗಳ ಕಾಟ ಹೆಚ್ಚಾಗಿರುತ್ತವೆ. ಇವೆಲ್ಲದರಿಂದ ರೈತನ ಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿ ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ ಎಂದು ಹೇಳಿದರು.