

ಹಿರೇಕೆರೂರ: ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಮಹಿಳೆಯರು ಸಡಗರ, ಸಂಭ್ರಮದಿಂದ ಆಚರಿಸಿದರು.
ಅಣ್ಣನ ಕರೆಯೋಲೆಯಂತೆ ತವರು ಮನೆಗೆ ಆಗಮಿಸುವ ಅಕ್ಕ, ತಂಗಿಯರು, ಮನೆಯಲ್ಲಿ ಬಗೆ ಬಗೆಯ ಉಂಡಿ, ಸಿಹಿ ತಿನಿಸುಗಳನ್ನು ತಯಾರಿಸಿ, ಬೆಳಗ್ಗೆ ಮನೆಯಲ್ಲಿ ಮಣ್ಣಿನಿಂದ ನಿರ್ವಿುಸಿದ ನಾಗಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ. ಕುಟುಂಬದ ಎಲ್ಲರೂ ಸೇರಿಕೊಂಡು ಸಮೀಪವಿರುವ ನಾಗದೇವರ ದೇವಸ್ಥಾನಗಳಿಗೆ ತೆರಳಿ, ಅಲ್ಲಿ ನಾಗ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ, ಹಾಲೆರೆದು, ಉಂಡಿ ಮತ್ತು ವಿವಿಧ ಸಿಹಿಗಳನ್ನು ನೈವೇದ್ಯ ಮಾಡುತ್ತಾರೆ. ನಂತರ ಮನೆಗೆ ತೆರಳಿ, ಹಿರಿಯರು, ನೆಂಟರು, ಅಕ್ಕ ತಂಗಿಯರು, ಅಣ್ಣ, ಅತ್ತಿಗೆಯೊಂದಿಗೆ ಕುಳಿತು ಊಟ ಸವಿಯುತ್ತಾರೆ. ಆಮೇಲೆ ಮರಕ್ಕೆ ಕಟ್ಟಿದ ಜೋಕಾಲಿ ಆಟವಾಡಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಭಾನುವಾರ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕೆಲವು ಗ್ರಾಮಗಳಲ್ಲಿ ಗಣಪತಿ ಹಬ್ಬದ ಚತುರ್ಥಿಯಂದು ಎರಡೂ ಹಬ್ಬಗಳನ್ನು ಒಮ್ಮೆಲೇ ಆಚರಣೆ ಮಾಡುತ್ತಾರೆ.