

ವಿಜಯವಾಣಿ ಸುದ್ದಿಜಾಲ ಧಾರವಾಡ
ದೀಪಾವಳಿ ಬಲಿಪಾಡ್ಯಮಿ ನಿಮಿತ್ತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಟ್ಟಿ ಹಬ್ಬವನ್ನು ಸಂಭ್ರಮ ಸಡಗರದಿಂದ ಮಂಗಳವಾರ ಆಚರಿಸಲಾಯಿತು.
ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲೇ ಹಬ್ಬದ ವಾತಾವರಣ ಸಾಕಷ್ಟು ಸಂಭ್ರಮದಿಂದ ಕೂಡಿತ್ತು. ದೀಪಾವಳಿ ಪಾಡ್ಯ ದಿನವನ್ನು ‘ಹಟ್ಟಿ ಹಬ್ಬ’ ಎಂದೇ ಆಚರಿಸುವುದು ವಾಡಿಕೆ. ಅದರಂತೆ ಜನರು ತಮ್ಮ ಮನೆಯಲ್ಲಿ ‘ಹಟ್ಟಿ ಲಕ್ಕವ್ವಳ’ನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು.
ತಾಲೂಕಿನ ಯಾದವಾಡ, ಕಲಕೇರಿ, ನಿಗದಿ, ನುಗ್ಗಿಕೇರಿ, ಮನಗುಂಡಿ, ಯರಿಕೊಪ್ಪ, ಹಳ್ಳಿಕೇರಿ, ಜೋಗೆಲ್ಲಾಪುರ, ಅಮ್ಮಿನಬಾವಿ, ಮನಸೂರು, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಪ್ರಭುನಗರ, ಹೊನ್ನಾಪುರ, ದೇವರಹುಬ್ಬಳ್ಳಿ, ಅಳ್ನಾವರ ಸೇರಿದಂತೆ ವಿವಿಧೆಡೆ ಮನೆಗಳಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು.
ಹಟ್ಟಿ ಲಕ್ಕವ್ವಳ ಪೂಜೆ ನೆರವೇರಿಸಿದ ನಂತರದಲ್ಲಿ ಒಕ್ಕಲುತನದ ಕೆಲಸಗಳನ್ನು ಮಾಡಲು ಅತ್ಯಂತ ಶ್ರೇಷ್ಠವಾದದ್ದು ಎಂಬುದು ಗ್ರಾಮೀಣ ಜನರಲ್ಲಿನ ನಂಬಿಕೆ. ಹೀಗಾಗಿ ಇಂದಿಗೂ ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಬಲಿಪಾಡ್ಯ ಮುನ್ನಾದಿನ ಮನೆಯಲ್ಲಿ ಆಕಳಿನ ಸಗಣಿ ಬಳಸಿ ತಾಯ್ತನಕ್ಕೆ ಹೆಸರುವಾಸಿಯಾದ ಹಟ್ಟಿ ಲಕ್ಕವ್ವಳ ಹಾಗೂ ಆಕೆ ಮಕ್ಕಳ ಪ್ರತಿಕೃತಿ ಪ್ರತಿಷ್ಠಾಪಿಸುತ್ತಾರೆ. ನಂತರ ಪ್ರತಿಕೃತಿಗಳನ್ನು ಕಬ್ಬು, ಬಾಳೆ, ಮಾವಿನ ತೋರಣ, ವಿವಿಧ ವಸ್ತುಗಳಿಂದ ಅಲಂಕರಿಸಿ, ಸಿಹಿ ಭೋಜನ ತಯಾರಿಸಿ ನೈವೇದ್ಯ ಅರ್ಪಿಸಿದ ಕುಟುಂಬಸ್ಥರು ಸಾಮೂಹಿಕ ಭೋಜನ ಸವಿದರು.
*ಎತ್ತುಗಳಿಗೆ ವಿಶೇಷ ಪೂಜೆ: ಮನೆಯಲ್ಲಿನ ಎತ್ತುಗಳ ಮೈಗೆ ಬಣ್ಣ ಬಳಿದು, ಕೋಡುಗಳಿಗೆ ರಿಬ್ಬನ್, ಬಲೂನ್ ಹಾಗೂ ವಿವಿಧ ವಸ್ತುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಗ್ರಾಮದಲ್ಲಿನ ದೇವಸ್ಥಾನಗಳಿಗೆ ಕರೆದೊಯ್ದು ಮೆರವಣಿಗೆ ನಡೆಸಿದರು. ಈ ವೈಭವ ನೋಡಲು ಗ್ರಾಮದ ಜನರೆಲ್ಲ ರಸ್ತೆಯುದ್ದಕ್ಕೂ ಸಾಲು ಸಾಲಾಗಿ ನೆರೆದಿದ್ದರು.
ಇನ್ನು ನಗರದ ಬಹುತೇಕ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಸುಭಾಷ್ ರಸ್ತೆ, ಸೂಪರ್ ಮಾರ್ಕೆಟ್, ಲೈನ್ ಬಜಾರ್ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿನ ಅಂಗಡಿಗಳಲ್ಲಿ ಬೆಳಗ್ಗೆ ವಿಶೇಷ ಪೂಜೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.