

ಹೊಸನಗರ: ತಾಲೂಕಿನ ಇತಿಹಾಸ ಪ್ರಸಿದ್ಧ ಹೊಸಬೀಡು ಶ್ರೀ ಗಂಗಾಧರೇಶ್ವರ ಸನ್ನಿಧಿಯಲ್ಲಿ ನಾಗರ ಪಂಚಮಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.
ದೇಗುಲದ ಪರಿವಾರ ದೇವರಾದ ನಾಗ ಸನ್ನಿಧಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. 2000 ಸಾವಿರ ವರ್ಷದ ಇತಿಹಾಸವಿರುವ 350 ನಾಗಕಲ್ಲುಗಳಿಗೆ ಭಕ್ತರು ವಿಶೇಷ ಹರಕೆ ಒಪ್ಪಿಸಿದರು. ವ್ಯಾಪಾರ, ಸಂತಾನ, ವಿದ್ಯೆ, ಆರೋಗ್ಯ ಬಾಧೆಗಳಿಗೆ ತುತ್ತಾದ ಭಕ್ತರು ಹರಕೆ ಕಟ್ಟಿಕೊಂಡು ನಾಗರಪಂಚಮಿಯಂದು ಒಪ್ಪಿಸುವುದು ವಾಡಿಕೆ. ರಾಜ್ಯದ ವಿವಿಧ ಮೂಲೆಯಿಂದ ಬಂದ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿದ್ದರು.
ಶ್ರೀ ಗಂಗಾಧರೇಶ್ವರ ದೇವರಿಗೆ ಪವಮಾನ, ರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕ, ಬಿಲ್ವಪತ್ರಾರ್ಚನೆ, ಸೇರಿದಂತೆ ವಿವಿಧ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ದೇವರ 9 ಪರಿವಾರ ದೇವರಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಇದಕ್ಕು ಮುನ್ನ ಹೊಸಬೀಡು ಮುಖ್ಯದ್ವಾರದಿಂದ ನಾಗಸನ್ನಿಧಿ ಮೂಲಕ ಗಂಗಾಧರೇಶ್ವರ ಸನ್ನಿಧಿವರೆಗೆ ಚಂಡೆವಾದನದೊಂದಿಗೆ ಭಕ್ತರು ಮೆರವಣಿಗೆ ನಡೆಸಿದರು.
ಹಳ್ಳಿಯಲ್ಲಿದೆ ನೆಮ್ಮದಿ:
ಪಟ್ಟಣದಲ್ಲಿ ಹಣವಿದೆ ಆದರೆ ಹಳ್ಳಿಯಲ್ಲಿ ನೆಮ್ಮದಿ ಇದೆ. ಇಲ್ಲಿಯ ಧಾರ್ಮಿಕ ಆಚರಣೆಗೆ ಬೆಲೆ ಇದೆ ಎಂದು ದಾಂಡೇಲಿಯ ಉದ್ಯಮಿ ಎಸ್.ಪ್ರಕಾಶ ಶೆಟ್ಟಿ ಅಭಿಪ್ರಾಯಿಸಿದರು.
ತಾಲೂಕಿನ ಹೊಸಬೀಡು ಶ್ರೀ ಗಂಗಾಧರೇಶ್ವರ ಸನ್ನಿಧಿಯಲ್ಲಿ ಹಮ್ಮಿಕೊಂಡಿದ್ದ ನಾಗರ ಪಂಚಮಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು, ಶ್ರೀ ಸನ್ನಿಧಿಗೆ ಧಾರ್ಮಿಕ ಶಕ್ತಿ ಇದೆ. ಆದರೆ ಇಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಿದೆ. ರಸ್ತೆ, ಶೌಚಗೃಹ ಸಮಸ್ಯೆಯನ್ನು ನೀಗಿಸಬೇಕಿದೆ ಎಂದರು. ಗ್ರಾಪಂ ಅಧ್ಯಕ್ಷೆ ದೇವಮ್ಮ ಗೋಪಾಲ್ ಮಾತನಾಡಿ, ಹೊಸಬೀಡು ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದ್ದು ಈ ಭಾಗದ ಆರಾಧ್ಯ ದೈವ ಶ್ರೀ ಗಂಗಾಧರೇಶ್ವರ. ಕಳೆದ 5 ವರ್ಷದಿಂದ ಟ್ರಸ್ಟ್ ಮತ್ತು ಸ್ಥಳೀಯರ ಸಹಕಾರದಿಂದ ಉತ್ತಮ ಅಭಿವೃದ್ಧಿ ಆಗುತ್ತಿದೆ. ಪಂಚಾಯಿತಿಯಿಂದ ಇಲ್ಲಿ ಶೌಚಗೃಹ ನಿರ್ಮಿಸಿ ಕೊಡಲಾಗುವುದು ಎಂದರು.
ಶ್ರೀ ಗಂಗಾಧರೇಶ್ವರ ದೇಗುಲ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಕೊಠಾರಿ ಮಾತನಾಡಿ, ಗಂಗಾಧೇಶ್ವರ ಸನ್ನಿಧಿಯನ್ನು ಸಂಪೂರ್ಣ ಶಿಲಾಮಯಗೊಳಿಸಿ ಜೀರ್ಣೋದ್ಧಾರ ಮಾಡಬೇಕಿದೆ. ಇದಕ್ಕೆ 4.5 ಕೋಟಿ ರೂ. ಬೇಕು. ಸರ್ಕಾರದಿಂದ 20 ಲಕ್ಷ ರೂ. ಬಂದಿದೆ. ಸಾಕಷ್ಟು ದಾನಿಗಳು ಹಣ ನೀಡಿದ್ದಾರೆ. ಗ್ರಾಮಸ್ಥರ ಸಹಕಾರ ದೊರೆತಲ್ಲಿ 2025ಕ್ಕೆ ಬ್ರಹ್ಮಕಲಶೋತ್ಸವ ಮಾಡುವ ಚಿಂತನೆ ಇದೆ ಎಂದು ಹೇಳಿದರು.
ಎಚ್.ಎನ್.ಸತೀಶ್ ಪ್ರಾಸ್ತಾವಿಕವಾಗಿ ದೇವಸ್ಥಾನದ ಇತಿಹಾಸ ಮತ್ತು ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.
ವಿಜಯಪುರದ ಉದ್ಯಮಿ ಸಂತೋಷ ಸೂರ್ಯವಂಶಿ, ಬಾಬಣ್ಣ ಬೆಂಗಳೂರು, ಕೇಶವಕುಮಾರ ಬೆಂಗಳೂರು, ಸೇವಾಸಮಿತಿ ಅಧ್ಯಕ್ಷ ಟಾಕಪ್ಪ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದಯ ಕೊಠಾರಿ, ಮಡಿವಾಳ ಪತ್ರಿಕೆಯ ಪ್ರಭಾಕರ ಶೆಟ್ಟಿ, ಗ್ರಾಮದ ಪ್ರಮುಖರು ಇದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಾನ್ವಿಗೆ ಆರ್ಥಿಕ ಸಹಾಯಧನ ವಿತರಿಸಲಾಯಿತು. ಟ್ರಸ್ಟ್ ಕಾರ್ಯದರ್ಶಿ ಶಶಿಧರ ಶೆಟ್ಟಿ ಸ್ವಾಗತಿಸಿದರು. ಸಂತೋಷ್ ಶೆಟ್ಟಿ ಮೊಳಹಳ್ಳಿ ನಿರೂಪಿಸಿದರು.