ಕರೊನಾ ವೈರಸ್ ನಿವಾರಣೆಗೆ ವಿಶೇಷ ಪೂಜೆ

15-RNR_05
Published on

ಹಾವೇರಿ: ಕರೊನಾ ವೈರಸ್ ರಾಜ್ಯದಲ್ಲೂ ಹರಡುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ರಾಜೇಂದ್ರ ನಗರದಲ್ಲಿರುವ ಉತ್ತರಾಧಿಮಠದ ಮಾರುತಿ ದೇವಸ್ಥಾನದಲ್ಲಿ ಭಾನುವಾರ ರೋಗ ಪರಿಹಾರ ಶ್ಲೋಕ ಪಠಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.

ರಾಜ್ಯದ ಎಲ್ಲ ಉತ್ತರಾಧಿಮಠದಲ್ಲಿ ಕರೊನಾ ವೈರಸ್ ನಿವಾರಣೆ ಸಲುವಾಗಿ ಶ್ಲೋಕ ಪಠಣ ಮಾಡಲಾಗುತ್ತಿದೆ. ಅದೇ ರೀತಿ ನಗರದಲ್ಲಿರುವ ಮಠದ ಶಾಖೆಯಿಂದಲೂ ಪೂಜೆ ಸಲ್ಲಿಸಲಾಯಿತು. 30ಕ್ಕೂ ಹೆಚ್ಚು ಭಕ್ತರು ಮಾರುತಿ ದೇವಸ್ಥಾನದಲ್ಲಿ ಶ್ಲೋಕ ಪಠಣ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಅದೇ ರೀತಿ ವಾಯು ಸ್ತುತಿ, ವಿಷ್ಣು ಸಹಸ್ರನಾಮ ಹೇಳಿ ಪೂಜೆ ಸಲ್ಲಿಸಿದರು.

ಪೂಜೆ ಕುರಿತು ಉತ್ತರಾಧಿಮಠದ ಶಾಖಾಧಿಕಾರಿ ವಾಸುದೇವಾಚಾರ್ ಮಾತನಾಡಿ, ಯಾವುದಾದರೂ ರೋಗಕ್ಕೆ ಯಾವ ಔಷಧವೂ ನಾಟದಿದ್ದರೆ, ವಿಷ್ಣು ಸಹಸ್ರನಾಮ ಪಠಣದಿಂದ ನಿವಾರಣೆ ಸಾಧ್ಯ ಎಂಬ ನಂಬಿಕೆಯಿದೆ. ಅದಕ್ಕಾಗಿ ಸಾರ್ವಜನಿಕರ ಆರೋಗ್ಯಕ್ಕೆ ಪ್ರಾರ್ಥಿಸಿ ಪೂಜೆ ಮಾಡುತ್ತಿದ್ದೇವೆ ಎಂದರು.

ಮೈಲಾರ ದೇವಸ್ಥಾನದಲ್ಲೂ ಪೂಜೆ: ನಗರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲೂ ಕರೊನಾ ನಿವಾರಣೆಗೆ ಪ್ರಾರ್ಥಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರಿಗೆ ಮಾಸ್ಕ್ ವಿತರಿಸಿ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ರೋಗದ ಬಗ್ಗೆ ಭಯಪಡದೆ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಊಹಾಪೋಹಗಳನ್ನು ನಂಬದಂತೆ ತಿಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net