

ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಶ್ರೀಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಕಡೇ ಕಾರ್ತಿಕ ಸೋಮವಾರ ಪ್ರಯುಕ್ತ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪೂಜಾ ಕೈಂಕರ್ಯ ನೆರವೇರಿತು.
ಬೆಳಗ್ಗೆ 8.30ರಲ್ಲಿ ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ಬಸವೇಶ್ವರಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿದರು. ಬಳಿಕ ಏಕವಾರು ಅಭಿಷೇಕ, ಪಂಚಾಮೃತಾಭಿಷೇಕ, ಪುಷ್ವಾರ್ಚನೆ, ಕುಂಕುಮಾರ್ಚನೆ, ಅಲಂಕಾರದ ಬಳಿಕ ಪೂಜಾ ವಿಧಿ-ವಿಧಾನಗಳು ನಡೆದವು.
ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಸಮೂಹ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಬಸವೇಶ್ವರ ಸ್ವಾಮಿಯ ದರ್ಶನ ಪಡೆಯಿತು. ಸನ್ನಿಧಿಯ ಆವರಣದಲ್ಲಿ ಭಕ್ತರು ತಮ್ಮ ವಾಹನಗಳಿಗೆ ಅರ್ಚಕರಿಂದ ಪೂಜೆ ಮಾಡಿಸಿ, ತೀರ್ಥ ಪ್ರೋಕ್ಷಣೆ ಬಳಿಕ ದೇಗುಲದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಸವೇಶ್ವರಸ್ವಾಮಿಯಲ್ಲಿ ಕೆಲ ಭಕ್ತರು ಮೊರೆ ಹೋದರೆ, ತಮ್ಮ ಬೇಡಿಕೆಗಳು ಈಗಾಗಲೇ ಫಲಿಸಿರುವ ಹಿನ್ನೆಲೆಯಲ್ಲಿ ಹಲವರು ಸನ್ನಿಧಿಗೆ ಆಗಮಿಸಿ ಹರಕೆ ಸಲ್ಲಿಸಿದರು. ನಾಗದೇವತೆಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿ ಬಸವ ಮೂರ್ತಿಗೆ ಕ್ಷೀರಾಭಿಷೇಕ ಮಾಡಿದರು. ಕಲ್ಯಾಣಿಯಲ್ಲಿ ಗಂಗಾಪೂಜೆ ಸಲ್ಲಿಸಿದ ಬಳಿಕ ಸನ್ನಿಧಿಯ ಎದುರಲ್ಲಿರುವ ಗರುಡಗಂಭದ ಬಳಿ ಹಣ್ಣು-ಕಾಯಿ ಸಮರ್ಪಿಸಿ ಗಂಧ-ಕರ್ಪೂರ ಬೆಳಗಿಸಿದರು.
ಶ್ರೀ ಕ್ಷೇತ್ರಕ್ಕೆ ಒಂದಲ್ಲ ಒಂದು ಬೇಡಿಕೆಗಳನ್ನು ಹೊತ್ತು ಬರುವುದು ಸಾಮಾನ್ಯ. ಕಂಕಣ ಭಾಗ್ಯ, ಸಂತಾನ ಭಾಗ್ಯ, ಜಮೀನು ಮತ್ತು ವಾಹನಗಳ ಖರೀದಿ, ಕಂಟಕ, ಚರ್ಮರೋಗ ಮತ್ತು ಸರ್ಪದೋಷ ನಿವಾರಣೆ, ದನ-ಜಾನುವಾರುಗಳಿಗೆ ರೋಗ ನಿವಾರಣೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಹರಕೆ ಹೊರಲಿದ್ದಾರೆ.
ಹಾಸನ ವ್ಯಾಪ್ತಿಯಿಂದಲ್ಲದೆ ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಬಸವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಹರಕೆ ಸಲ್ಲಿಸಿದರು. ಸುತ್ತಮುತ್ತಲ ಗ್ರಾಮಗಳ ರೈತರು ತಮ್ಮ ಜಾನುವಾರುಗಳನ್ನು ಕರೆತಂದು ದೇಗುಲದ ಸುತ್ತ ಪ್ರದಕ್ಷಿಣೆ ಬಂದ ಬಳಿಕ ಅರ್ಚಕರಿಂದ ತೀರ್ಥ ಪ್ರೋಕ್ಷಣೆ ಹಾಕಿಸಿದರು.
ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಬರಿಗೈಯಲ್ಲಿ ಎಂದಿಗೂ ಹಿಂದಿರುಗಿಲ್ಲ. ಸನ್ನಿಧಿಯಲ್ಲಿ ಹರಕೆ ಹೊತ್ತ ಸ್ವಲ್ಪ ದಿನಗಳಲ್ಲಿಯೇ ಸಂಕಷ್ಟಗಳು ನಿವಾರಣೆಗೊಂಡು ಇಷ್ಟಾರ್ಥಗಳು ಫಲಿಸುತ್ತವೆ. ಈಹಿನ್ನೆಲೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ಹರಕೆ ಸಲ್ಲಿಸುತ್ತಾರೆ.
ಬಿ.ಎನ್.ರಂಗೇಗೌಡ ಭಕ್ತ, ಬಿಳಿಕೆರೆ ಗ್ರಾಮ