ಕರೊನಾ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್

carona
Published on

ತುಮಕೂರು: ಮಾರಣಾಂತಿಕ ಕರೊನಾ ವೈರಸ್ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ಹಾಸಿಗೆಯ ವಿಶೇಷ ವಾರ್ಡ್ ತೆರೆದು, ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ.

ದಿನದ 24 ಗಂಟೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ ಸನ್ನದ್ಧವಾಗಿದ್ದು ಅಗತ್ಯ ಔಷಧ, ಮೂಲಸೌಕರ್ಯಗಳನ್ನು ಒದಗಿಸಿದ ವಿಶೇಷ ವಾರ್ಡ್ ಈಗಾಗಲೇ ಕಾರ್ಯಾರಂಭಿಸಿದೆ. ಕರೊನಾ ವೈರಸ್‌ಗೆ ನಿರ್ದಿಷ್ಟ ಚಿಕಿತ್ಸೆ ಕಂಡು ಹಿಡಿಯಲಾಗಿಲ್ಲ. ಆದರೆ ರೋಗ ಹರಡದಂತೆ ತಡೆಗಟ್ಟಬಹುದಾಗಿದೆ. ಕೈಕಾಲುಗಳನ್ನು ಸೋಪು, ನೀರಿನಿಂದ ತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಕೆಮ್ಮುವಾಗ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು.

ತುಮಕೂರು ಜಿಲ್ಲೆಯಲ್ಲಿ ಜನರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಸಂಶಯಾತ್ಮಕ ಸೋಂಕು ಕಂಡು ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ವೈರಸ್‌ನ ಲಕ್ಷಣಗಳಿರುವವರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ತಿಳಿಸಿದರು.

ಚೀನಾದ ವುಹಾನ್ ಮೊದಲು ಪತ್ತೆಯಾಗಿದ್ದ ಕರೊನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದೆ. ಭಾರತ ಸೇರಿ ಒಟ್ಟು 24 ರಾಷ್ಟ್ರಗಳಿಗೆ ವೈರಸ್ ಹರಡಿದೆ. ಕರ್ನಾಟಕಕ್ಕೂ ವೈರಸ್ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು, ಚೀನಾಕ್ಕೆ ಭೇಟಿ ನೀಡಿ ವಾಪಸ್ ಆಗಿರುವವರಿಗೆ ತಪಾಸಣೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net