

ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕರಾವಳಿ ಭಾಗದ ಜನರಿಗೆ ಫೆ.17ರಂದು ತೆರಳಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದ ರೈಲು ಭರ್ತಿಯಾಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ಗೆ ಫೆ.14ರ ಮಧ್ಯಾಹ್ನ 1 ಗಂಟೆಯ ವೇಳೆಗೆ ಅವಕಾಶ ಮಾಡಿಕೊಡಲಾಗಿತ್ತು. ಕೇವಲ 15 ನಿಮಿಷದಲ್ಲೇ ಎಲ್ಲ ಆಸನಗಳು ಭರ್ತಿಯಾಗಿದ್ದು, ಬಹಳ ಜನರಿಗೆ ನಿರಾಸೆಯಾಗಿದೆ.
ಬೆಳಗ್ಗೆ 8 ಗಂಟೆಯಿಂದಲೇ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣ ಸಹಿತ ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಕಾದಿರಿಸಲು ಯಾತ್ರಾರ್ಥಿಗಳು ಕಾದು ಕುಳಿತಿದ್ದರು. ಮಧ್ಯಾಹ್ನ 1 ಗಂಟೆಗೆ ಬುಕ್ಕಿಂಗ್ ತೆರೆದು 1:15ರೊಳಗೆ ಬಂದ್ ಆಗಿದ್ದು, ಟಿಕೆಟ್ ಸಿಗದೆ ಅನೇಕರು ಮರಳಿದರು.
ಉಡುಪಿಯಿಂದ ಪ್ರಯಾಗ್ರಾಜ್ಗೆ ತೆರಳಲು ಮಾತ್ರ ಟಿಕೆಟ್ ಬುಕ್ಕಿಂಗ್ಗೆ ಮಧ್ಯಾಹ್ನ ಅವಕಾಶ ನೀಡಲಾಗಿತ್ತು. ಆದರೆ, ಅಲ್ಲಿಂದ ವಾಪಸ್ ಬರುವ ರೈಲಿನ ಟಿಕೆಟ್ ಬುಕ್ಕಿಂಗ್ಗೆ ಆ ವೇಳೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಬಹುತೇಕ ಯಾತ್ರಿಕರು ಗೊಂದಲಕ್ಕೊಳಗಾದರು. ವಿಚಾರ ತಿಳಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಕೊಂಕಣ ರೈಲ್ವೆ ಅಧಿಕಾರಿಗಳು ದಿಲ್ಲಿಗೆ ನಿರಂತರ ಸಂಪರ್ಕ ಸಾಧಿಸಿ, ರಾತ್ರಿ 8 ಗಂಟೆಯ ವೇಳೆಗೆ ರಿರ್ಟನ್ ಬುಕ್ಕಿಂಗ್ ಅವಕಾಶ ನೀಡಲಾಯಿತು. ಆದರೆ, ಆ ವೇಳೆಗೆ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್ ಬಂದ್ ಆಗಿದ್ದವು. ಆನ್ಲೈನ್ನಲ್ಲಿ ಮಾತ್ರ ಅವಕಾಶ ನೀಡಿದ್ದರಿಂದ ಪ್ರಯಾಗರಾಜ್ಗೆ ಹೋಗಲು ಟಿಕೆಟ್ ಕಾದಿರಿಸಿದ್ದ ಹಲವರಿಗೆ ವಾಪಸ್ ಬರಲು ಟಿಕೆಟ್ ಲಭಿಸಲಿಲ್ಲ.
ಉಡುಪಿ ನಿಲ್ದಾಣದಿಂದ ಫೆ.17ರಂದು ಮಧ್ಯಾಹ್ನ 12:30ಕ್ಕೆ 'ಮಹಾಕುಂಭ ಸ್ಪೆಷಲ್ ಟ್ರೈನ್' (ರೈಲು ನಂ.01192) ಹೊರಡಲಿದೆ. ಕುಂದಾಪುರ, ಕಾರವಾರ, ಮಡಗಾಂವ್, ರತ್ನಗಿರಿ, ರೋಹಾ, ಕಲ್ಯಾಣ್, ನಾಸಿಕ್ ಮಾರ್ಗವಾಗಿ ತೆರಳಿ ಫೆ.19ರಂದು ಬೆಳಗ್ಗೆ 6:30ಕ್ಕೆ ಪ್ರಯಾಗ್ರಾಜ್ ಜಂಕ್ಷನ್ ತಲುಪಲಿದೆ. ಅಲ್ಲಿ ಜನರನ್ನು ಇಳಿಸಿ ಫತೇಪುರ, ಗೋವಿಂದಪುರಿ ಇಟ್ಟಾ ಮೂಲಕ ಕುಂಡ್ಲಾ ಜಂಕ್ಷನ್ನಲ್ಲಿ ಪ್ರಯಾಣ ಮುಕ್ತಾಯಗೊಳಿಸಲಿದೆ. ಫೆ.20ರ ಬೆಳಗ್ಗೆ 9:30ಕ್ಕೆ ತುಂಡ್ಲಾ ಜಂಕ್ಷನ್ನಿಂದ ಹೊರಡುವ ಈ ರೈಲು (ರೈಲು ನಂ.01191) ಸಂಜೆ 6:25ಕ್ಕೆ ಪ್ರಯಾಗ್ರಾಜ್ ಜಂಕ್ಷನ್ಗೆ ಬರಲಿದೆ. ಅಲ್ಲಿಂದ ಪ್ರಯಾಣ ಬೆಳೆಸಿ ಫೆ.22ರ ಸಂಜೆ 6:10ಕ್ಕೆ ಉಡುಪಿ ರೈಲು ನಿಲ್ದಾಣ ತಲುಪಲಿದೆ. ಈ ಇಲೆಕ್ಟ್ರಿಕ್ ಟ್ರೈನ್ 96 ಗಂಟೆಗಳ ಅವಧಿಯಲ್ಲಿ 3,500 ಕಿಮೀ ಸಂಚರಿಸಲಿದ್ದು, ಒಟ್ಟು 21 ಐಸಿಎಫ್ ಕೋಚ್ ಹೊಂದಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ನನ್ನ ಮನವಿಗೆ ಕೇಂದ್ರ ಸರ್ಕಾರ ಕರಾವಳಿ ಭಾಗದ ಜನರಿಗೆ ಮಹಾಕುಂಭಕ್ಕೆ ತೆರಳಲು ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಸಮಯ ತುಂಬ ಕಡಿಮೆ ಇದ್ದುದರಿಂದ ಟಿಕೆಟ್ ಬುಕ್ಕಿಂಗ್ ವೇಳೆ ಸಣ್ಣಪುಟ್ಟ ಗೊಂದಲವಾಗಿದ್ದು ನಿಜ. ಎಲ್ಲವೂ ಸರಿಯಾಗಲಿದೆ. ಅಲ್ಲಿಂದ ಮರಳಿ ಬರಲು ಆನ್ಲೈನ್ನಲ್ಲಿ ಮಾತ್ರ ಬುಕ್ಕಿಂಗ್ ವ್ಯವಸ್ಥೆಯಾಗಿದ್ದರಿಂದ ಸಮಸ್ಯೆಯಾಯಿತು. ಇನ್ನೊಂದು ವಿಶೇಷ ರೈಲು ವ್ಯವಸ್ಥೆ ಮಾಡುವಂತೆಯೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. | ಕೋಟ ಶ್ರೀನಿವಾಸ್ ಪೂಜಾರಿ. ಸಂಸದ