

ಗಂಗಾವತಿ: ಗಂಗಾವತಿಗೆ ಮಂಜೂರಾದ ಜಿಲ್ಲಾ ವಿಶೇಷ ನ್ಯಾಯಾಲಯ ವಿರೋಧಿಸುತ್ತಿರುವ ಕೊಪ್ಪಳ ವಕೀಲರ ಸಂಘದ ಕ್ರಮ ಖಂಡಿಸಿ ತಾಲೂಕು ವಕೀಲರ ಸಂಘದ ಸದಸ್ಯರು ನಗರದ ವಕೀಲರ ಸಂಘದ ಕಚೇರಿಯಲ್ಲಿ ತುರ್ತು ಸಭೆ ಶನಿವಾರ ನಡೆಸಿದರು.
ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನಲ್ಲಿ ಅತಿಹೆಚ್ಚು ಪ್ರಕರಣಗಳಿದ್ದು, ಪರಿಗಣಿಸಿದ ಹೈಕೋರ್ಟ್ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಕ್ಕೆ ವಿಶೇಷ ನ್ಯಾಯಾಲಯ ಎಂದು ಮೇಲ್ದರ್ಜೆಗೇರಿಸಿದೆ.
ಇದಕ್ಕೆ ವಿರೋಧಿಸಿದ ಕೊಪ್ಪಳ ತಾಲೂಕು ವಕೀಲರ ಸಂಘದ ಸದಸ್ಯರು ಕಲಾಪ ಬಹಿಷ್ಕಾರದ ಮೂಲಕ ವಿಶೇಷ ನ್ಯಾಯಾಲಯದ ಸ್ಥಾನಮಾನ ರದ್ದುಗೊಳಿಸುವ ನಿರ್ಣಯ ತೆಗೆದುಕೊಂಡಿದ್ದರು. ಕೊಪ್ಪಳ ವಕೀಲರ ಸಂಘದ ಕ್ರಮ ಖಂಡಿಸಿದ ತಾಲೂಕು ವಕೀಲರ ಸಂಘದ ಸದಸ್ಯರು, ತುರ್ತು ಸಭೆ ಮೂಲಕ ಹೋರಾಟದ ಎಚ್ಚರಿಕೆ ನೀಡಿದರು.
ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಮಾತನಾಡಿ, ಪ್ರತಿಹಂತದಲ್ಲಿ ಗಂಗಾವತಿ ವಕೀಲರ ಸಂಘಕ್ಕೆ, ಕೊಪ್ಪಳ ವಕೀಲರ ಸಂಘ ಅಸಹಕಾರ ಮುಂದುವರಿಸಿದೆ. ನಗರಕ್ಕೆ ಮಂಜೂರಾದ ವಿಶೇಷ ನ್ಯಾಯಾಲಯ ವಿರೋಧಿಸುತ್ತಿರುವುದು ಖಂಡನೀಯವಾಗಿದ್ದು, ಮುಂದುವರೆಸಿದರೆ ಜಿಲ್ಲೆಯಿಂದ ಹೊರಬರುವ ಸ್ಥಿತಿ ಬರಲಿದೆ.
ಇಲ್ಲವೇ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ತೀವ್ರಗೊಳಿಸಲಾಗುವುದು. ಕೊಪ್ಪಳ ವಕೀಲರ ಸಂಘದಿಂದ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಸ್ಪರ್ಧಿಸಿದರೆ ಗಂಗಾವತಿ ವಕೀಲ ಸಂಘ ಬೆಂಬಲಿಸಲ್ಲ. ಕೊಪ್ಪಳ ಜಿಲ್ಲಾ ವಕೀಲರ ಸಂಘದ ಹೆಸರಿನಲ್ಲಿ ಅಖಂಡ ಗಂಗಾವತಿ ವಕೀಲರ ಸಂಘಕ್ಕೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ಇದೇ ರೀತಿಯಲ್ಲಿ ಅಸಹಕಾರ ಮುಂದುವರೆಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಪದಾಧಿಕಾರಿಗಳಾದ ಡಿ.ಎ. ಹಾಲಸಮುದ್ರ, ನಾಗನಗೌಡ ಪಾಟೀಲ್, ಮಹೇಶ ಕುಲಕರ್ಣಿ, ಶರಣಗೌಡ ಮಾಲಿ ಪಾಟೀಲ್, ಪ್ರಕಾಶ ಕುಸುಬಿ, ನಜೀರ್ ಹುಸೇನ್, ಸಲೀಂ ಪಾಷಾ, ಅಕ್ಕಮಹಾದೇವಿ, ಸೌಭಾಗ್ಯ ಲಕ್ಷ್ಮೀ, ರಾಜೇಶ್ವರಿ, ರೋಜಾ, ಶರಣಮ್ಮ ಇತರರಿದ್ದರು.