ಪುತ್ತೂರು: ಬ್ಯಾಂಕ್ ಸಾಲ ವಸೂಲಾತಿಗೆ ಮನೆಗೆ ಹೋದ ಅಧಿಕಾರಿಗಳನ್ನು ಕೂಡಿ ಹಾಕಿ, ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆ ಹಾಕಿದ ಉದ್ಯಮಿಗಳಿಬ್ಬರ ಪತ್ತೆಗೆ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿದೆ.
ಬಲ್ನಾಡಿನನಲ್ಲಿರುವ ಬಂಗಲೆಯಲ್ಲಿ ಸಂಪ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಮನೆಯ ಸುತ್ತ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ದ್ವಿಚಕ್ರವಾಹನ ಮಾರಾಟ ಮಳಿಗೆ ಮಾಲೀಕ ಕೃಷ್ಣ ಕಿಶೋರ್ ಹಾಗೂ ಪೆಟ್ರೋಲ್ ಪಂಪ್ ಮಾಲೀಕ ಅಖಿಲೇಶ್ ತಮ್ಮ ಮೊಬೈಲ್ ಪೋನ್‌ಗಳನ್ನು ಸ್ವಿಚ್‌ಆಫ್ ಮಾಡಿಕೊಂಡಿದ್ದಾರೆ. ಪೊಲೀಸರು ತಾಂತ್ರಿಕ ತನಿಖೆಗೆ ಮುಂದಾಗಿದ್ದಾರೆ.
ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನದ ಭೀತಿ ಎದುರಿಸುತ್ತಿರುವ ಇಬ್ಬರು ಆರೋಪಿಗಳು ಪೊಲೀಸರು ಮನೆಗೆ ಬರುವ ಸಂದರ್ಭದ ಗುಡ್ಡಕ್ಕೆ ಓಡಿ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳು ಕೇರಳ ಅಥವಾ ಬೆಂಗಳೂರು ಮೂಲಕ ಉತ್ತರ ಭಾರತದ ಕಡೆಗೆ ಪರಾರಿಯಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಅವರು ಸಂಬಂಧಿಕರ ಮನೆ ಸೇರಿರುವ ಸಾಧ್ಯತೆ ಇದೆ. ಬ್ಯಾಂಕ್ ಅಧಿಕಾರಿಗಳಿಗೆ ತೋರಿಸಿದ ಪಿಸ್ತೂಲ್‌ಗೆ ಉದ್ಯಮಿ ಕೃಷ್ಣ ಕಿಶೋರ್ ಲೈಸೆನ್ಸ್ ಹೊಂದಿದ್ದಾರೆ. ಪರಾರಿ ಸಂದರ್ಭ ಪಿಸ್ತೂಲನ್ನು ಜತೆಗೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಮನೆ ತನಿಖೆ ವೇಳೆ ಪಿಸ್ತೂಲ್ ಪತ್ತೆಯಾಗಿಲ್ಲ ಎನ್ನಲಾಗಿದೆ. ಕೆಲವು ದಿನಗಳಿಂದ ಆರೋಪಿಗಳು ಹೆಚ್ಚುವರಿ ಸಾಲಕ್ಕಾಗಿ ಬ್ಯಾಂಕ್‌ಗಳ ಮೊರೆ ಹೋಗಿದ್ದರು ಎಂಬ ಮಾಹಿತಿ ಇದೆ. ಸ್ಥಳೀಯ ಸಹಕಾರಿ ಸಂಘದಲ್ಲೂ ಸಾಲ ಪಡೆದಿದ್ದಾರೆಂಬ ಮಾತು ಕೇಳಿ ಬರುತ್ತಿದೆ.