

ಮಂಡ್ಯ: ಜಿಲ್ಲೆಯಲ್ಲಿ ದಾಖಲಾದ ಮಕ್ಕಳ ಅಪಹರಣ ಮತ್ತು ನಾಪತ್ತೆಯಾದ ಮಕ್ಕಳ ಪ್ರಕರಣವನ್ನು ಪರಿಶೀಲನೆ ನಡೆಸುವುದರ ಜತೆಗೆ ಅವರ ಪತ್ತೆಗೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಆಯೋಜಿಸಿದ್ದ ಕಾಣೆಯಾದ ಮಕ್ಕಳ ವಿಶೇಷ ಕಾರ್ಯಪಡೆ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕಾಣೆಯಾದ ಮಕ್ಕಳಿಗೆ ಸಂಬಂಧಿಸಿದಂತೆ ಪಾಲಕರನ್ನು ಕರೆದು ದೂರಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಆ ಮೂಲಕ ಮಗುವಿನ ಪತ್ತೆಗೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಹಲವಾರು ವರ್ಷದಿಂದ ಪತ್ತೆ ಹಚ್ಚಲು ಸಾಧ್ಯವಾಗದ ಪ್ರಕರಣಗಳ ಕುರಿತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಮಟ್ಟದಲ್ಲಿ ವಿಶೇಷ ಆಂದೋಲನವನ್ನು ಆಯೋಜಿಸಿ. ಇದರೊಂದಿಗೆ ಪ್ರಕರಣವನ್ನು ಬಗೆಹರಿಸಬೇಕು ಎಂದರು.
ಸಮಿತಿಯ ಸದಸ್ಯ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ಅಪಹರಣ ಮತ್ತು ಕಾಣೆಯಾದ ಮಕ್ಕಳ ಕಳ್ಳ ಸಾಗಾಣಿಕೆ ಕುರಿತಂತೆ ಸ್ವ-ಸಹಾಯ ಗುಂಪುಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪೊಲೀಸ್ ಇಲಾಖೆಯು ಮಕ್ಕಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ, ಶೀಘ್ರವಾಗಿ ಬಗೆಹರಿಸಿ ಪಾಲಕರ ವಶಕ್ಕೆ ನೀಡಬೇಕು. ಅದೇ ರೀತಿ ನಾಪತ್ತೆಯಾಗುವ ಮಕ್ಕಳು ನೇರವಾಗಿ ಪಾಲಕರಿಗೆ ಸಿಕ್ಕಂತಹ ಸಂದರ್ಭದಲ್ಲಿ ಠಾಣೆಗೆ ಮಾಹಿತಿ ನೀಡಬೇಕು. ಇದರಿಂದ ಕಾಣೆಯಾದ ಮಕ್ಕಳ ಪ್ರಕರಣಗಳನ್ನು ಇತ್ಯರ್ಥ ಮಾಡಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಶ್ಮಿ ಮಾತನಾಡಿ, ಕಾಣೆಯಾದ ಮಕ್ಕಳು ಸಾರ್ವಜನಿಕರಿಗೆ ಅಥವಾ ಮಕ್ಕಳ ಸಹಾಯವಾಣಿ, ಪೊಲೀಸರಿಂದ ಬಾಲಮಂದಿರಕ್ಕೆ ದಾಖಲಾದ ಮಕ್ಕಳನ್ನು ಆಪ್ತ ಸಮಾಲೋಚನೆ ಮಾಡಲಾಗುವುದು. ನಂತರ ಮಗುವಿನ ಮಾಹಿತಿಯನ್ನು ಪಡೆದು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಸಂಬಂಧಪಟ್ಟ ಪಾಲಕರ ವಶಕ್ಕೆ ಅಥವಾ ಸಂಬಂಧಪಟ್ಟ ಜಿಲ್ಲೆ ಮತ್ತು ರಾಜ್ಯಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಸೇರಿದಂತೆ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲ ನ್ಯಾಯ ಮಂಡಳಿಯ ಸದಸ್ಯರು ಇದ್ದರು.