

ಮಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಅಕ್ರಮ ಗೋಸಾಗಾಟ ಪ್ರಕರಣಗಳ ಪತ್ತೆ ಹಾಗೂ ತ್ವರಿತ ಕಾರ್ಯಾಚರಣೆ ಉದ್ದೇಶದಿಂದ ನಗರ ಪೊಲೀಸ್ ಕಮಿಷನರ್ ವಿಶೇಷ ಸ್ಕ್ವಾಡ್ ರಚಿಸಿದ್ದಾರೆ.
ಜಾನುವಾರು ಕಳವು ಮತ್ತು ಅಕ್ರಮ ಸಾಗಾಟ ಪತ್ತೆ ದಳವನ್ನು ರಚಿಸಲಾಗಿದ್ದು, ಪ್ರಸ್ತುತ ಅದರ ಮೂಲಕ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಂಪ್‌ವೆಲ್ ಬಳಿ ಭಾನುವಾರದ ಪ್ರಕರಣದ ಕಾರ್ಯಾಚರಣೆಯನ್ನೂ ಇದೇ ದಳದ ಮೂಲಕ ನಡೆಸಲಾಗಿತ್ತು.
ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ಈ ವಿಶೇಷ ತಂಡವು ಅ.5ರಿಂದಲೇ ಕಾರ್ಯತತ್ಪರವಾಗಿದೆ. ನಗರದಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಗರಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಸ್ಥಳಗಳಲ್ಲಿ ಒಟ್ಟು 32 ಕಡೆ ಚೆಕ್‌ಪೋಸ್ಟ್ ತೆರೆದು ವಾಹನ ತಪಾಸಣೆ ನಡೆಸಲಾಗುತ್ತಿದೆ. ರಾತ್ರಿ ರೌಂಡ್ಸ್ ಕರ್ತವ್ಯ ಚುರುಕುಗೊಳಿಸಲಾಗಿದೆ. ಬೆಳಗ್ಗೆ ವಿಶೇಷ ರೌಂಡ್ಸ್‌ಗಾಗಿ ಎಸ್‌ಐ ದರ್ಜೆಯ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ದರ್ಜೆಯ ಅಧಿಕಾರಿಯನ್ನು ಪ್ರತಿದಿನ ಉಪವಿಭಾಗವಾರು ಮೇಲ್ವಿಚಾರಕರಾಗಿ ನಿಯೋಜಿಸಲಾಗಿದೆ.
ತಂಡ ರಚನೆಯಾದ ಬಳಿಕ ಒಟ್ಟು 7 ಅಕ್ರಮ ಗೋಸಾಗಾಟ/ಗೋವಧೆ ಕಾಯ್ದೆಯಡಿಯ ಪ್ರಕರಣ ಮಾಹಿತಿ ಸಂಗ್ರಹಿಸಿ ಪತ್ತೆ ಮಾಡಿ, 28 ಜಾನುವಾರುಗಳ ರಕ್ಷಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.