

ಚಳ್ಳಕೆರೆ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣ ಅಬ್ಬರಕ್ಕೆ ಜನ ತತ್ತರಿಸಿದ್ದರೆ, ಇತ್ತ ಬಯಲುಸೀಮೆ ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿನಲ್ಲಿ ಜನ ಮುಗಿಲತ್ತ ಮುಖ ಮಾಡಿ ವರುಣನ ಕೃಪೆಗೆ ದೇವರ ಮೊರೆ ಹೋಗಿದ್ದಾರೆ.
ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಭಾನುವಾರ ರಾತ್ರಿ ಕತ್ತೆಗಳಿಗೆ ಮದುವೆ ಮಾಡಿ, ವಿಶೇಷ ಆಚರಣೆ ಮೂಲಕ ಮಳೆರಾಯನ ಮನಗೆಲ್ಲಲು ಪ್ರಯತ್ನಿಸಿದರು.
ಹೆಣ್ಣು-ಗಂಡಿಗೆ ಶಾಸ್ತ್ರ, ಸಂಪ್ರದಾಯದಂತೆ ಮದುವೆ ನೆರವೇರಿಸುವ ಮಾದರಿಯಲ್ಲಿ ಗ್ರಾಮದ ದೇವಸ್ಥಾನದ ಮುಂಭಾಗದಲ್ಲಿ ಜನರ ಸಮ್ಮುಖದಲ್ಲಿ ಕತ್ತೆಗಳ ವಿವಾಹ ಮಾಡಲಾಯಿತು.
ಗ್ರಾಮದಲ್ಲಿ ಸಂಬಂಧಿಗಳಾಗುವ ಮಡಿವಾಳ ಕೆಂಚಪ್ಪ ಹೆಣ್ಣು ಕತ್ತೆಯ ವಾರಸುವಾಗಿ, ಕಲಾವಿದ ಕುಬೇರಪ್ಪ ಗಂಡು ಕತ್ತೆಯ ಕುಟುಂಬಸ್ಥನಾಗಿ ಸಂಬಂಧಿಕರ ನಡುವೆ ಹಣ್ಣು-ತಾಂಬೂಲ ಬದಲಾಯಿಸಿ, ಒಬ್ಬರಿಗೊಬ್ಬರು ಕಂಕಣ ಕಟ್ಟಿಕೊಂಡ ಬಳಿಕ ಹೆಣ್ಣು ಕತ್ತೆಗೆ ಮದುವಣಗಿತ್ತಿಯಂತೆ ಅಲಂಕಾರ ಮಾಡಿ ಸಂಭ್ರಮಿಸಿದರು.
ಗಂಡು ಕತ್ತೆಗೆ ಪೇಟ ಸುತ್ತಿ, ಪಂಚೆ ಕಟ್ಟಿ ಹೂವಿನ ಹಾರಗಳನ್ನು ಹಾಕಿ, ಹಿರಿಯರಾದ ಕಾವಲು ಗೌರಣ್ಣ, ಹನುಮಂತರಾಯರ ಪೌರೋಹಿತ್ಯದಲ್ಲಿ ಮದುವೆ ಕಾರ್ಯ ನೆರವೇರಿಸಲಾಯಿತು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ನವದಂಪತಿಯ ಮೆರವಣಿಗೆ ನಡೆಸಿ ಜನ-ಜಾನುವಾರುಗಳ ಜೀವ ರಕ್ಷಣೆಗೆ ಅನುಗ್ರಹ ತೋರಿಸು ದೇವರೆ ಎಂದು ವರುಣ ದೇವನಲ್ಲಿ ಗ್ರಾಮಸ್ಥರು ಪ್ರಾರ್ಥನೆ ನಡೆಸಿದರು.
ಮದುವೆ ನಡೆದ ಮರುದಿನ ಸೋಮವಾರ ಗಂಗಮ್ಮನ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
ಗ್ರಾಪಂ ಅಧ್ಯಕ್ಷೆ ಕರಿಯಮ್ಮ, ಮುಖಂಡರಾದ ಗೋವಿಂದಪ್ಪ, ಓಂಕಾರಪ್ಪ, ಸಣ್ಣ ತಿಮ್ಮಣ್ಣ, ಕಾವಲು ಗೌರಣ್ಣ, ನರಸಿಂಹಪ್ಪ, ಎಂ.ಆರ್.ಶ್ರೀನಿವಾಸರೆಡ್ಡಿ, ತಿಪ್ಪೇಸ್ವಾಮಿ, ಈರಣ್ಣ, ಕೆ.ಶಿವಣ್ಣ ಇದ್ದರು.