ಅಭಿವೃದ್ಧಿ ನಿರ್ಣಾಯಕ, ಬಿಜೆಪಿಗೆ ಪೂರಕ!; ಪಾಲಿಕೆ ಚುನಾವಣೆ ಕುರಿತು ವಿಜಯವಾಣಿ ವಿಶೇಷ

Palike election
Published on

ಕರೊನಾ ಸೋಂಕು ನಿಯಂತ್ರಣ ಸವಾಲಿನ ನಡುವೆಯೇ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಬಳಿಕ ಘೋಷಣೆಯಾದ ಈ ಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಅಲ್ಲದೆ, ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿನ ತನ್ನ ಸಂಘಟನೆಯ ಭದ್ರ ನೆಲೆಯನ್ನು ಕಾಪಿಟ್ಟುಕೊಳ್ಳುವ ಸವಾಲು ಎದುರಾಗಿದೆ. ಮೂರೂ ಕಡೆ ಪ್ರತಿಪಕ್ಷ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡುತ್ತಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳ ಜತೆಜತೆಗೆ ನಾಯಕರ ವರ್ಚಸ್ಸಿನ ಮೇಲೆ ಗೆಲುವಿನ ನಗೆ ಬೀರುವ ಎಲ್ಲ ರಣತಂತ್ರಗಳನ್ನು ಹೆಣೆಯುವಲ್ಲಿ ಕಮಲ ಪಡೆ ಮುಂಚೂಣಿಯಲ್ಲಿದೆ. ಈ ಕುರಿತ ವಿಜಯವಾಣಿ ಚುನಾವಣಾ ವಿಶ್ಲೇಷಣೆ ಇಲ್ಲಿದೆ.

ಗದ್ದುಗೆಗೇರೋ ಆಟ ಮತ ವಿಭಜನೆ ಕಾಟ

| ಸ.ದಾ.ಜೋಶಿ ಕಲಬುರಗಿ

ಕಲಬುರಗಿ ಪಾಲಿಕೆ ಗದ್ದುಗೆಗೇರಲು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಬಿಗ್ ಫೈಟ್ ನಡೆದಿದೆ. ಜೆಡಿಎಸ್, ಮಜ್ಲೀಸ್-ಎ-ಇತ್ತೇಹಾದುಲ್ ಮುಸಲ್ಮೀನ್(ಎಂಐಎಂ), ಆಮ್ ಆದ್ಮಿ ಪಾರ್ಟಿ (ಆಪ್) ಜತೆಗೆ ಪಕ್ಷೇತರರೂ ಕೆಲವೆಡೆ ಪ್ರಬಲ ಪೈಪೋಟಿಯೊಡ್ಡಿರುವುದು ವ್ಯಾಪಕ ಮತ ವಿಭಜನೆಗೆ ಕಾರಣವಾಗಲಿದ್ದು, ಇದು ಯಾರಿಗೆ ಲಾಭ ಅಥವಾ ನಷ್ಟ ತರುತ್ತದೆಯೋ ಎಂಬ ಲೆಕ್ಕಾಚಾರ ಕದನ ಕುತೂಹಲ ಹೆಚ್ಚಿಸಿದೆ.

ಕಳೆದ ಬಾರಿ ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ಏರ್ಪಟ್ಟಿತ್ತು. 23 ಸ್ಥಾನ ಪಡೆದಿದ್ದ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಪಕ್ಷೇತರರು ಹಾಗೂ ಇತರರ ಬೆಂಬಲದಿಂದ ಅಧಿಕಾರ ನಡೆಸಿತ್ತು. ಜೆಡಿಎಸ್ 10 ಸ್ಥಾನ ಗಳಿಸಿದರೆ, ಬಿಜೆಪಿ ಮತ್ತು ಕೆಜೆಪಿ ತಲಾ 7 ಕಡೆ ಗೆದ್ದಿದ್ದವು. ಇದೀಗ ಲೋಕಲ್ ಪಾಲಿಟಿಕ್ಸ್​ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮಾಜಿ ಸಿಎಂ ಧರ್ಮಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ ಅಗಲಿಕೆ ಮತ್ತು ಹಿರಿಯ ನೇತಾರ ಮಲ್ಲಿಕಾರ್ಜುನ ಖರ್ಗೆ ಸ್ಥಳೀಯವಾಗಿ ಮೊದಲಿನಂತೆ ಸಕ್ರಿಯ ಇರದಿರುವುದು ಕೈ ಶಕ್ತಿಯನ್ನು ಸಹಜವಾಗಿಯೇ ಕುಗ್ಗಿಸಿದೆ. ಇಂಥ ಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಹೇಗಾದರೂ ಸರಿ, ಪಾಲಿಕೆ ಮೇಲೆ ಕೇಸರಿ ಝುಂಡಾ ಹಾರಿಸಲು ತಂತ್ರ ಹೆಣೆಯುತ್ತಿದೆ.

ಪಾಲಿಕೆ ಕಲಬುರಗಿ ಉತ್ತರ (28 ವಾರ್ಡ್) ಮತ್ತು ದಕ್ಷಿಣ (27 ವಾರ್ಡ್) ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ. ದಕ್ಷಿಣದಲ್ಲಿ ಬಿಜೆಪಿ, ಉತ್ತರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಉತ್ತರ ಕ್ಷೇತ್ರದ ಅರ್ಧಕ್ಕೂ ಹೆಚ್ಚು ವಾರ್ಡ್ ಅಲ್ಪಸಂಖ್ಯಾತರ ಪ್ರಾಬಲ್ಯ ಹೊಂದಿವೆ. ಕಾಂಗ್ರೆಸ್ ಇಂಥ ವಾರ್ಡ್​ಗಳನ್ನೇ ಹೆಚ್ಚಾಗಿ ನಂಬಿದೆ. ಆದರೆ ಇದೇ ಮೊದಲ ಸಲ ಎಂಐಎಂ 20 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿದ್ದು, ಉತ್ತರ ಕ್ಷೇತ್ರ ಮೇಲೆ ನಿಗಾ ಕೇಂದ್ರೀಕರಿಸಿದೆ. ಕಾಂಗ್ರೆಸ್ ಎಲ್ಲ 55 ವಾರ್ಡ್​ಗಳಲ್ಲಿ ಸ್ಪರ್ಧಿಸಿದರೆ, ಬಿಜೆಪಿ 47, ಜೆಡಿಎಸ್ 45, ಆಪ್ 26ರಲ್ಲಿ ಕಣಕ್ಕಿಳಿದಿದೆ. 83 ಪಕ್ಷೇತರರಿದ್ದಾರೆ. ಇವರಲ್ಲಿ ರಾಷ್ಟ್ರೀಯ ಪಕ್ಷಗಳ ಟಿಕೆಟ್ ವಂಚಿತರೂ ಸೇರಿದ್ದು, ಬಂಡಾಯದ ಬಿಸಿ ಜೋರಾಗಿಯೇ ತಟ್ಟಿದೆ. ಕಳೆದ ಸಲ 7 ಸ್ಥಾನ ಪಕ್ಷೇತರರ ಪಾಲಾಗಿದ್ದವು. ಈಗಲೂ ಕೆಲವೆಡೆ ಇವರು ಜಿದ್ದಿನ ಸಂಘರ್ಷ ನಡೆಸಿದ್ದಾರೆ. ಸದ್ಯದ ಕಣದ ಚಿತ್ರಣ ಅವಲೋಕಿಸಿದರೆ ಮತ ವಿಭಜನೆ ಪಕ್ಕಾ ಎನಿಸಿದ್ದು, ಎಲ್ಲ ಲೆಕ್ಕಾಚಾರಗಳು ಉಲ್ಟಾ-ಪಲ್ಟಾ ಮಾಡಬಹುದಾಗಿದ್ದರಿಂದ ಪಾಲಿಕೆ ಗದ್ದುಗೆಗೆ ಏರೋರು ಯಾರು ಎಂಬುದು ಸಸ್ಪೆನ್ಸ್ ಆಗಿಯೇ ಉಳಿದಿದೆ.

ಹುಬ್ಬಳ್ಳಿಯಲ್ಲಿ ಹ್ಯಾಟ್ರಿಕ್ ಸಾಧನೆಗೆ ತಂತ್ರ

| ಆನಂದ ಅಂಗಡಿ ಹುಬ್ಬಳ್ಳಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ತವರೂರಾದ ಹುಬ್ಬಳ್ಳಿ-ಧಾರವಾಡದಲ್ಲಿ ಈಗ ಮಹಾನಗರ ಪಾಲಿಕೆ ಚುನಾವಣೆಯ ಕಾವು ಏರಿದ್ದು, ರಾಜ್ಯಾದ್ಯಂತ ಗಮನಸೆಳೆಯುತ್ತಿದೆ. ಬಿಜೆಪಿಯ ಘಟಾನುಘಟಿಗಳು ಅವಳಿ ನಗರದಲ್ಲಿ ನೆಲೆಸಿರುವುದು ಹಾಗೂ ಈ ಪ್ರದೇಶವು ಅನೇಕ ದಶಕಗಳಿಂದ ಬಿಜೆಪಿಯ ಶಕ್ತಿ ಕೇಂದ್ರ ಆಗಿರುವುದು ಪಾಲಿಕೆ ಚುನಾವಣೆಯಲ್ಲಿ ಈ ಪಕ್ಷಕ್ಕೆ ಸಹಜವಾಗಿಯೇ ಲಾಭ ತಂದುಕೊಡಲಿದೆ. ಇದೇ ವೇಳೆ, ಕಾಂಗ್ರೆಸ್ ಹಿರಿಯ ನಾಯಕರ ಕೊರತೆ ಅನುಭವಿಸುತ್ತಿದೆ. ಹೊರಜಿಲ್ಲೆಯ ನಾಯಕರೇ ಬಂದು ಟಿಕೆಟ್ ಹಂಚಿಹೋಗಿದ್ದಾರೆ. ಜೆಡಿಎಸ್ ಪರಿಸ್ಥಿತಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ 2 ಅವಧಿಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿಯೂ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡುವ ಉತ್ಸಾಹ ಇಲ್ಲಿನ ಮುಖಂಡರು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಲ್ಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಬಾರಿ 60 ವಾರ್ಡ್​ಗಳಿದ್ದವು. ಈ ಬಾರಿ ಮರುವಿಂಗಡಣೆ ನಂತರ 82 ವಾರ್ಡ್​ಗಳು ರಚನೆಯಾಗಿವೆ. ಶೇ.50 ವಾರ್ಡ್​ಗಳಲ್ಲಿ ಮಹಿಳಾ ಮೀಸಲಾತಿ ಇರುವುದರಿಂದ ಸ್ತ್ರೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಣದಲ್ಲಿದ್ದಾರೆ.

ಬಿಜೆಪಿ ಶಾಸಕರ ಪ್ರಾಬಲ್ಯ: ಒಟ್ಟು ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರಲ್ಲಿ ಬಿಜೆಪಿ ಶಾಸಕರಿದ್ದಾರೆ. ತಲಾ 25 ವಾರ್ಡ್​ಗಳಿರುವ ಹು-ಧಾ ಸೆಂಟ್ರಲ್ ಹಾಗೂ ಹು-ಧಾ ಪಶ್ಚಿಮ, 9 ವಾರ್ಡ್​ಗಳಿರುವ ಧಾರವಾಡ ವಿಧಾನಸಭೆ ಕ್ಷೇತ್ರ ತೆಕ್ಕೆಯಲ್ಲಿದ್ದರೆ, 23 ವಾರ್ಡ್​ಗಳಿರುವ ಹು-ಧಾ ಪೂರ್ವ ಕ್ಷೇತ್ರ ಕಾಂಗ್ರೆಸ್ ಶಾಸಕರ ಕೈಯಲ್ಲಿದೆ.

ಬೆಳಗಾವಿ ಮೇಯರ್​ಗಿರಿ ಹಿಡಿಯಲು ಕಾತರ!

| ರಾಯಣ್ಣ ಆರ್.ಸಿ. ಬೆಳಗಾವಿ

ಸುಪ್ರೀಂಕೋರ್ಟ್​ನಲ್ಲಿರುವ ಕರ್ನಾಟಕ- ಮಹಾರಾಷ್ಟ್ರದ ಗಡಿ ವಿವಾದದಿಂದಾಗಿ ಆಗಾಗ ಚರ್ಚೆಯಲ್ಲಿರುವ ಬೆಳಗಾವಿ ಈಗ ಮಹಾನಗರ ಪಾಲಿಕೆ ಚುನಾವಣೆಯಿಂದಾಗಿ ಮತ್ತೆ ರಾಜ್ಯದ ಗಮನ ಸೆಳೆಯುತ್ತಿದೆ. 58 ವಾರ್ಡ್​ಗಳ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯುತ್ತಿದೆ. ‘ಮೇಯರ್’ ಗದ್ದುಗೆ ಏರಲು ಬಿಜೆಪಿ ರಣತಂತ್ರ ರೂಪಿಸಿದೆ.

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ, ಅಮೃತ ಸಿಟಿ, ಸಮಗ್ರ ನಗರಾಭಿವೃದ್ಧಿ ಯೋಜನೆ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಅಭ್ಯರ್ಥಿಗಳು ಮತಯಾಚನೆ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ಕಣ ರಂಗೇರುತ್ತಿದೆ. ಸಚಿವ ಗೋವಿಂದ ಕಾರಜೋಳ, ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಸೋಮವಾರದಿಂದ ರಾಜ್ಯ ಮಟ್ಟದ ನಾಯಕರ ದಂಡೇ ಬೆಳಗಾವಿಗೆ ಆಗಮಿಸಲಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಿಡಿತ ಸಾಧಿಸುವುದೇ ಈಗ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿಯ 27 ಜನ ಕಣದಲ್ಲಿದ್ದರೆ, ಜೆಡಿಎಸ್​ನ 12 ಅಭ್ಯರ್ಥಿಗಳೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಎಂಇಎಸ್ ನಿರ್ನಾಮ: ‘ಭಾಷಾ’ ವಿವಾದ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮುಖಂಡರಿಗೆ ಪಾಲಿಕೆ ಚುನಾವಣೆಯು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೇಗಾದರೂ ಮಾಡಿ 8-10 ಸ್ಥಾನಗಳನ್ನಾದರೂ ಗೆಲ್ಲಬೇಕೆಂದು ಎಂಇಎಸ್ ಕೆಲ ಕಡೆಗಳಲ್ಲಿ ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್ 49 ವಾರ್ಡ್​ಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 9 ಕಡೆ ಎಂಇಎಸ್ ಜತೆ ಅಪರೋಕ್ಷವಾಗಿ ಕೈಜೋಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net