

ಮಂಡ್ಯ: ಹಸಿದವರಿಗೆ ಅನ್ನ ಹಾಕುವುದು ಮತ್ತು ಅಡುಗೆ ಮಾಡುವ ಕಾಯಕ ಶ್ರೇಷ್ಟವಾದದ್ದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅಡುಗೆ ಮಾಡುವ ಸಿಬ್ಬಂದಿ ಮತ್ತು ಸಹಾಯಕರಿಗೆ ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆ ಕುರಿತು ಆಯೋಜಿಸಲಾಗಿದ್ದ ವಿಶೇಷ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶುಚಿ ಹಾಗೂ ರುಚಿಯಾದ ಅಡುಗೆ ಮಾಡಿಕೊಟ್ಟರೆ ಅವರು ದೈಹಿಕ ಹಾಗೂ ಮಾನಸಿಕವಾಗಿ ಶಕ್ತಿಯುತರಾಗಿ ತಮ್ಮ ಓದಿನಲ್ಲಿ ಸಂತೋಷದಿಂದ ತೊಡಗಿಕೊಳ್ಳುತ್ತಾರೆ. ಅಡುಗೆ ತಯಾರಕರು ಹಾಗೂ ಸಹಾಯಕರು ಪರಿಶ್ರಮದಿಂದ ಇಲಾಖೆ ಹಾಗೂ ಜಿಲ್ಲೆಗೆ ಕೀರ್ತಿ ತರುವಂತಾಗಬೇಕು. ಈ ವೇಳೆ ತಮ್ಮ ಕಾಲೇಜಿನ ಜೀವನ ನೆನೆದ ಡಿಸಿ, ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ 5 ವರ್ಷ ಕಳೆದ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿ ಮತ್ತು ಸಹಾಯಕರ ಜತೆ ಇದ್ದ ಭಾವನೆಯನ್ನು ಮೆಲುಕು ಹಾಕಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಡುಗೆ ಸಿಬ್ಬಂದಿ ಕೊಡುಗೆ ಬಹುಮುಖ್ಯವಾದದ್ದು. ಹಾಗಾಗಿ ಎಲ್ಲ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸಿ. ಜಿಪಂನಿಂದ ಈಗಾಗಲೇ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಜಿಲ್ಲಾ ಮಟ್ಟದ ಸಹಾಯವಾಣಿ ತೆರೆಯಲಾಗಿದೆ. ಇದಕ್ಕೆ ಸಂಬಂಧಿಸಿದ ಮೊಬೈಲ್ ಸಂಖ್ಯೆಯನ್ನು ಎಲ್ಲ ವಿದ್ಯಾರ್ಥಿ ನಿಲಯ ಎದುರು, ಅಡುಗೆ ಮನೆ, ಊಟದ ಮನೆ ಮುಂಭಾಗದಲ್ಲಿ ಅಳವಡಿಸುವಂತೆ ಸೂಚಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೆ.ಮಂಜುಳಾ ಇತರರಿದ್ದರು.