ವಿಜಯವಾಣಿ ಸುದ್ದಿಜಾಲ ಅರಸೀಕೆರೆ ಗ್ರಾಮಾಂತರ ನಗರದ ಹೊರವಲಯ ಕಂತೇನಹಳ್ಳಿಯಲ್ಲಿರುವ ಶ್ರೀ ಶನೈಶ್ಚರ ಸ್ವಾಮಿಗೆ ಭೀಮನ ಅಮವಾಸ್ಯೆ ಪ್ರಯುಕ್ತ ಭಾನುವಾರ ವಿಶೇಷ ಪೂಜಾ ಕೈಂಕರ್ಯಗಳು ಸಡಗರ, ಸಂಭ್ರಮದಿಂದ ನೆರವೇರಿತು.
ಪ್ರಾತಃ ಕಾಲದಿಂದಲೇ ಸ್ವಾಮಿಗೆ ತೈಲಾಭಿಷೇಕ, ಪಂಚಾಮೃತ ಅಭಿಷೇಕದೊಂದಿಗೆ ಪೂಜೆ ನೆರವೇರಿಸಲಾಯಿತು. ಸ್ವಾಮಿ ವಿಗ್ರಹಕ್ಕೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ತಿಪಟೂರು ನರಸಿಂಹ ಜೋಯಿಸ್ ಮತ್ತು ತಂಡದಿಂದ ಗಣಪತಿ, ನವಗ್ರಹ ಮತ್ತು ರುದ್ರ ಹೋಮ ಹವನಾದಿಗಳನ್ನು ನೆರವೇರಿತು.
ದೇವಾಲಯ ಆವರಣದಲ್ಲಿರುವ ನವಗ್ರಹ, ಶ್ರೀ ವಿಘ್ನೇಶ್ವರ, ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಭಕ್ತಾಧಿಗಳಿಗೆ ಸಾಮೂಹಿಕ ಅನ್ನ ಸಂತರ್ಪಣೆ ಮಾಡಲಾಯಿತು. ದೇವಾಲಯದ ಪ್ರಧಾನ ಅರ್ಚಕ ಮುರಳಿ ಮಂದಾರ್ತಿ, ಸಹಾಯಕ ಅರ್ಚಕ ಕಾರ್ತಿಕ್ ಇತರರು ಇದ್ದರು.