ಕಾವೇರಿ ಆರತಿ ನಿರಂತರವಾಗಿ ನಡೆಯಲಿ: ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಮತ

Special Puja to Kaveri Mata Mandya
Published on

ಮಂಡ್ಯ: ಪಂಚಭೂತಗಳಲ್ಲಿ ಜಲಕ್ಕೆ ಬಹಳಷ್ಟು ಮಾನ್ಯತೆ ಇದೆ. ರಾಜ್ಯ ಸರ್ಕಾರ ಕೃಷ್ಣರಾಜಸಾಗರ ಜಲಾಶಯದ ಬಳಿ ಕಾವೇರಿ ಆರತಿ ಕಾರ್ಯಕ್ರಮವನ್ನು ಈ ವರ್ಷದಿಂದ ಪ್ರಾರಂಭ ಮಾಡಿದೆ. ಇದು ನಿರಂತರವಾಗಿ ನಡೆಯುವಂತಾಗಲಿ. ಜಿಲ್ಲೆಯ ಜನರು ಕಾವೇರಿ ನದಿಯನ್ನು ಎಷ್ಟರ ಮಟ್ಟಿಗೆ ಕೃತಜ್ಞರಾಗಿದ್ದಾರೆ ಎಂಬುದನ್ನು ಎಲ್ಲರೂ ನೋಡಿದ್ದಾರೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ತಲಕಾವೇರಿಯಲ್ಲಿ ಕಾವೇರಿ ತೀಥೋದ್ಭವ ಹಿನ್ನೆಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾವೇರಿ ಮಾತೆಗೆ ಪೂಜೆ, ಅಭಿನಂದನಾ ಸಮಾರಂಭ ಹಾಗೂ ಅನ್ನ ದಾಸೋಹ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಂಬಾಡಿ ತುಂಬಿದೆ ಎಂದು ಖುಷಿಪಡುವ ಅಗತ್ಯವಿಲ್ಲ. ಅದರಲ್ಲಿ ತುಂಬಿರುವುದು ಬರೀ ಹೂಳು ಅಷ್ಟೆ. ನೀರಿನ ಮಟ್ಟ ಕಡಿಮೆ ಇದೆ ಎಂಬುದನ್ನು ತಿಳಿಯಬೇಕು ಎಂದರು.

ಹಲವು ಬಾರಿ ನಾಡಿನಲ್ಲಿ ಬರ ಬಂದು ಕೃಷ್ಣರಾಜಸಾಗರ ಜಲಾಶಯ ಖಾಲಿಯಾದ ಸಂದರ್ಭದಲ್ಲಿ ನಾವು ಏನೆಲ್ಲ ಅನುಭವಿಸಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ತುಂಬಿದೆ ಎಂದು ಖುಷಿಪಡುವ ಅಗತ್ಯವಿಲ್ಲ. ಕನ್ನಂಬಾಡಿಯಲ್ಲಿ ಅತಿ ಹೆಚ್ಚಾಗಿ ಹೂಳು ತುಂಬಿದೆ. ಅದರಿಂದಾಗಿ ನೀರು ತುಂಬಿದಂತೆ ಕಾಣುತ್ತದೆ ಎಂಬುದನ್ನು ಯಾರೂ ಮರೆಯಬಾರದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಠಿಯಿಂದಾಗಿ ಕೃಷ್ಣರಾಜಸಾಗರ ಜಲಾಶಯ ನಿರ್ಮಾಣವಾಗಿ ಈ ಭಾಗದಲ್ಲಿ ನೀರಾವರಿ ಪ್ರದೇಶವಾಗುವುದರ ಜತೆಗೆ ಹಲವಾರು ಜಿಲ್ಲೆಗಳ ಜನರ ದಾಹ ತಣಿಸುತ್ತಿರುವ ಕಾವೇರಿ ಮಾತೆಯನ್ನು ಪೂಜೆಸುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ ಎಂದರು.

ಇಡೀ ಭರತ ಖಂಡವನ್ನು ಸಪ್ತ ನದಿಗಳು ರಕ್ಷಿಸುತ್ತಿವೆ. ಜೀವಮಾತೆಯಾಗಿ ಕಂಗೊಳಿಸಿವೆ. ನಮ್ಮ ವ್ಯಾಪ್ತಿಯಲ್ಲಿ ಕಾವೇರಿ ತಾಯಿ ಇದ್ದಾಳೆ. ಆಕೆಗೆ ಪೂಜೆ ಸಲ್ಲಿಸುತ್ತೇವೆ. ಇದಿಷ್ಟೇ ಸಾಲದು ಕಾವೇರಿಯನ್ನು ಶುದ್ಧ ಮಾಡುವ ಕರ್ತವ್ಯವೂ ನಮ್ಮದಾಗಬೇಕು. ಕಾವೇರಿ ನಾಡಿನಲ್ಲಿ ಜ್ವಲಂತ ಸಮಸ್ಯೆಗಳಿವೆ ಕಾವೇರಿ ಬಳಕೆ ಮಾಡುವುದರ ಜತೆಗೆ ರಕ್ಷಣೆಯನ್ನೂ ಮಾಡಬೇಕಿದೆ. ಕಾಲುವೆ ವಿಚಾರದಲ್ಲಿ ಬಹಳಷ್ಟು ಕೆಲಸಗಳಾಗಬೇಕು. ಶುದ್ಧ ಮತ್ತು ವೃದ್ಧಿಗೆ ಪ್ರಾಧಾನ್ಯತೆ ನೀಡಬೇಕಿದೆ. ಕಾಲುವೆಗಳನ್ನು ನಿರ್ಮಾಣ ಮಾಡುವಲ್ಲಿ ನಾವು ಸೋತಿದ್ದೇವೆ. ಎಲ್ಲೆಲ್ಲಿ ಕಾಲುವೆಗಳು ಹರಿದುಹೋಗಿವೆ ಅಲ್ಲಿ ರೈತರು, ಅಧಿಕಾರಿಗಳನ್ನು ಒಟ್ಟಿಗೆ ಸೇರಿಸಿ ಕಾರ್ಯಕ್ರಮ ರೂಪಿಸುವ ಅಗತ್ಯತೆಗಳೂ ಹೆಚ್ಚಿವೆ ಎಂದು ಸಲಹೆ ನೀಡಿದರು.

ಕೃಷ್ಣರಾಜಸಾಗರ ಜಲಾಶಯಿಂದ ಬರುವ ನೀರು ಮದ್ದೂರು, ಮಳವಳ್ಳಿ, ನಾಗಮಂಗಲಕ್ಕೆ ಹೋಗುವುದಿಲ್ಲ. ಅಲ್ಲಿನ ಜನತೆ ಗಲಾಟೆ ಮಾಡುತ್ತಿರುವುದನ್ನು ನಾವು ನೋಡಿದ್ದೇವೆ. ಮೊದಲು ಮಿತ ನೀರಿನ ಬಳಕೆ, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾಲುವೆಗಳನ್ನು ಸರಿಪಡಿಸಿಕೊಂಡು ಅದರಲ್ಲಿನ ಕಸ, ಕಡ್ಡಿಯನ್ನು ತೆಗೆದು ತಮ್ಮ ಜಮೀನಿಗೆ ಸರಿಯಾದ ಪ್ರಮಾಣದಲ್ಲಿ ತಾಯಿ ಕಾವೇರಿ ಹರಿಯುವಂತೆ ಮಾಡುವುದು ರೈತರು, ಅಧಿಕಾರಿಗಳ ಕರ್ತವ್ಯವಾಗಬೇಕು. ಹಲವು ಕಡೆಗಳಲ್ಲಿ ಕಾಲುವೆಗಳನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ಬೇರೆಡೆ ಜಮೀನುಗಳನ್ನು ತೆಕ್ಕಲು ಬಿಡುವ ರೈತರು, ಕಾಲುವೆ, ಬಂಡಿದಾರಿಗಳನ್ನೇ ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯುತ್ತಾರೆ. ಇಂತಹ ಧೋರಣೆ ಸರಿಯಲ್ಲ, ನಮ್ಮಂತೆ ಇತರರೂ ಬದುಕಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಚಿಂತನೆಗೆ ಹಚ್ಚಬೇಕು ಎಂದು ಕಿವಿಮಾತು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ಪ್ರಗತಿ ಪರಿಶೀಲನಾ ವೇಳೆ ಇಡೀ ರಾಜ್ಯಕ್ಕೆ ಹೋಲಿಸಿದರೆ, ಮಂಡ್ಯ ಜಿಲ್ಲೆಯಲ್ಲಿ ಭತ್ತದ ಇಳುವರಿ ಕಡಿಮೆ ಇದೆ. ಈ ಬಗ್ಗೆ ಚಿಂತನೆ ನಡೆಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸಲಹೆ ನೀಡಿದರು. ಇದಕ್ಕೆ ಕಾರಣ ಅತಿ ಹೆಚ್ಚು ಪ್ರಮಾಣದಲ್ಲಿ ನೀರು ಮತ್ತು ರಾಸಾಯನಿಕ ಬಳಕೆ ಎಂಬುದನ್ನು ಪ್ರತಿಯೊಬ್ಬ ರೈತರೂ ಅರ್ಥ ಮಾಡಿಕೊಳ್ಳಬೇಕು. ನೀರನ್ನು ಶುದ್ಧಿಗೆ ಬಳಸಿಕೊಳ್ಳಬೇಕೇ ಹೊರತು ಅಶುದ್ಧಿ ಮಾಡಬಾರದು. ನೀರನ್ನು ವೃದ್ಧಿಗೆ ಬಳಸಿಕೊಳ್ಳಬೇಕು. ಆಗ ಮಾತ್ರ ಅತ್ಯಮೂಲ್ಯವಾದ ನೀರನ್ನು ಉಳಿಸಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಆದಿಚುಂಚನಗಿರಿಯ ಶಂಭುನಾಥಸ್ವಾಮೀಜಿ ಮಾತನಾಡಿ, ರಾಗದ್ವೇಷಗಳನ್ನು ಬಿಟ್ಟು ರೈತರಿಗೆ ಶಾಶ್ವತವಾದ ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅತ್ಯಂತ ಒಳ್ಳೆಯ ಕೆಲಸ ಮಾಡಿದ್ದಾರೆ. ಇನ್ನೂ ಅವರು ಜೀವಂತವಾಗಿದ್ದಾರೆ ಎಂದರೆ ಅವರು ಮಾಡಿರುವ ಕಾರ್ಯಗಳೇ ಹೇಳುತ್ತವೆ ಎಂದು ಹೇಳಿದರು.

ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕೀರ್ತಿನಂದನಾಥ ಸ್ವಾಮೀಜಿ, ಮಾಜಿ ಶಾಸಕ ಎಂ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಟ್ರಸ್ಟ್ ಅಧ್ಯಕ್ಷ ವೆಂಕಟೇಶ್ ಇತರರಿದ್ದರು. ಇದೇ ವೇಳೆ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹಾಗೂ ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್(ಶಿವಪ್ಪ) ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net