

ಕೊಪ್ಪ: ಜಗತ್ತನ್ನು ಭೋಗದಿಂದ ಯೋಗದತ್ತ ಸೆಳೆಯಲು ಶ್ರೀ ಕೃಷ್ಣ ಬಾಲ್ಯದಿಂದಲೂ ಅನೇಕ ಪವಾಡಗಳನ್ನು ಮಾಡಿ ತರಕಾಸುರ, ಕಂಸ, ಜರಾಸಂದರಂತಹ ದುಷ್ಟರನ್ನು ಶಿಕ್ಷಿಸಿ, ಸಮಾಜದಲ್ಲಿ ಶಾಂತಿ ನೆಲೆಸಲು ಪ್ರೇರಣೆ ನೀಡಿದ ಶ್ರೀ ಕೃಷ್ಣ. ಕೃಷ್ಣ ಎಂದರೇ ಸದ್ವಿವೇಕ, ಸದಾಚಾರ, ಸರ್ಮಪಣೆ ಎಂದು ಶಾಲೆ ಸಂಸ್ಥಾಪಕ, ಸಾಹಿತಿ ಎಚ್.ಎಂ ರವಿಕಾಂತ್ ಹೆಳಿದರು.
ಹಿರೇಕೊಡಿಗೆ ಗ್ರಾಪಂ ವ್ಯಾಪ್ತಿಯ ಗಡಿಕಲ್ಲಿನ ಅಕ್ಷರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕೃಷ್ಣ ಹಾಗೂ ರಾಧೆ ವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷ್ಣ ಯೋಧನಾಗಿ, ರಾಜ ನೀತೀಜ್ಞಾನಾಗಿ, ಮಾರ್ಗದರ್ಶಿಯಾಗಿ ಸಮಾಜದ ಉನ್ನತಿಗೆ ಕೊಡುಗೆ ನೀಡಿದ್ದಾರೆ. ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ, ಭಾರತೀಯ ಉನ್ನತ ಪರಂಪರೆಯ ಪ್ರತೀಕವಾಗಿದೆ. ಯುಗ, ಯುಗಗಳಲ್ಲಿಯೂ ಅದು ಚಿರಸ್ಥಾಯಿಯಾಗಿ ಮುನುಷ್ಯನ ಜೀವನಕ್ಕೆ ದಾರಿ ದೀಪವಾಗಿದೆ ಎಂದರು.
ದೇವಂಗಿ ಗ್ರಾಪಂ ಸದಸ್ಯ ಸರೋಜಾ ನಾಗಪ್ಪ ಗೌಡ ಮಾತನಾಡಿ, ಮಕ್ಕಳಲ್ಲಿ ಕಲೆ, ಸಂಸ್ಕೃತಿಅರಿವು ಮೂಡಿಸುವಲ್ಲಿ ಇಂತಹ ಸ್ಪರ್ಧೆಗಳು ಯಶಸ್ವಿಯಾಗುತ್ತದೆ. ಸೋಲು-ಗೆಲುವುಗಳಿಗಿಂತ ಸ್ಪರ್ಧಿಸುವುದು ಮುಖ್ಯ. ಪುಟಾಣಿ ಮಕ್ಕಳು ರಾಧಾ-ಕೃಷ್ಣರ ವೇಷ ಧರಿಸಿ ಕುಣಿದಾಡುವುದು ರೋಮಾಂಚನ ಎನಿಸುತ್ತದೆ ಎಂದರು.
ಲಾಸ್ಯ ಪ್ರೀಯ, ನಿಶ್ಚಿತ, ಶಿಕ್ಷಕ ಅಮರೇಶ್, ಮುಖ್ಯಶಿಕ್ಷಕ ರಾಜೇಶ್ ಇದ್ದರು.