

ಹಿರೇಕೆರೂರ: ಪಟ್ಟಣದ ದುರ್ಗಾದೇವಿಗೆ ಶ್ರಾವಣ ಮಾಸದ ಕೊನೆಯ ಮಂಗಳವಾರ (ಆ. 19ರಂದು) ಬೆಳಗ್ಗೆ ದೇವಿಗೆ ವಿಶೇಷ ಪೂಜೆ ನೆರವೇರಿಸಿ, ವಜ್ರಾಭರಣ ಮತ್ತು ಹೂವುಗಳಿಂದ ವಿಶೇಷ ಅಲಂಕಾರ ನೆರವೇರಲಿದೆ.
ಪೂಜೆಯ ನಂತರ ದೇವಿಗೆ ಉಡಿ ತುಂಬುವುದು, ಮಹಾಮಂಗಳಾರತಿ ಹಾಗೂ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ದೇವಿಯ ತವರು ಮನೆಯಾದ ಬಾಳಂಬೀಡ ಗ್ರಾಮದ ಭಕ್ತರಿಂದ ಉಡಿ ತುಂಬುವ ಕಾರ್ಯ ನಡೆಯಲಿದೆ.
ಪಟ್ಟಣದ ಹಿರಿದಾದ ಕೆರೆಯ ಏರಿಯ ಮೇಲೆ ನೆಲೆಸಿರುವ ಶಕ್ತಿರೂಪಿಣಿ ದುರ್ಗಾದೇವಿ ರಾಜ್ಯದಲ್ಲಿ ಅಷ್ಟೇ ಅಲ್ಲ, ಪಕ್ಕದ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಅಪಾರ ಭಕ್ತ ಸಮೂಹ ಹೊಂದಿದ್ದಾಳೆ. ಶ್ರಾವಣ ಮಾಸದ ಕೊನೆಯ ಮಂಗಳವಾರ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುವುದರಿಂದ ಜಾತ್ರೆಯ ದೃಶ್ಯ ಸೃಷ್ಟಿಯಾಗುತ್ತದೆ.
ದುರ್ಗಾದೇವಿ ಇಲ್ಲಿಗೆ ಬಂದು ನೆಲೆಸಿದ ಬಗ್ಗೆ ಕುತೂಹಲಕರ ಕಥೆ ಇದೆ. ನೂರಾರು ವರ್ಷಗಳ ಹಿಂದೆ ಇಲ್ಲಿಂದ 20 ಕಿಮೀ ದೂರದ ಬಂದಳಿಕೆ ಗ್ರಾಮದ ಸಮೀಪ ಅಕ್ಕ ಬನಶಂಕರಿ ದೇವಿಯ ಜತೆಗೆ ಕೆರೆಯ ಏರಿಯ ಮೇಲೆ ಪ್ರತಿಷ್ಠಾಪನೆಗೊಂಡಿದ್ದ ದುರ್ಗಾದೇವಿಗೆ ಭಕ್ತರು ಮಾಂಸಾಹಾರ ನೈವೇದ್ಯ ನೀಡುತ್ತಿದ್ದರು. ಇದನ್ನು ಬನಶಂಕರಿ ಆಕ್ಷೇಪಿಸಿದಾಗ ಭಕ್ತರ ನೈವೇದ್ಯ ತಿರಸ್ಕರಿಸಲು ಆಗದೇ ದುರ್ಗಾದೇವಿ ಭಕ್ತರಿಗಾಗಿ ಅಲ್ಲಿಂದ ಬೇರೆ ಕಡೆಗೆ ತೆರಳುವುದಾಗಿ ನಿರ್ಧರಿಸುತ್ತಾಳೆ. ಒಂದು ದಿನ ಯುವತಿಯೊಬ್ಬಳ ಮೈಯಲ್ಲಿ ಬಂದು ತನ್ನನ್ನು 7 ತೂಬುಗಳಿರುವ ಕೆರೆಯ ಏರಿಯ ಮೇಲೆ ಪ್ರತಿಷ್ಠಾಪನೆ ಮಾಡುವಂತೆ ತಿಳಿಸುತ್ತಾಳೆ. ಅದರಂತೆ ದುರ್ಗಾದೇವಿ ಹಾಗೂ ಆಕೆಯ ಪರಿವಾರವಾಗಿರುವ ಸಾವಂತ್ರಮ್ಮ, ಮರಿಯಮ್ಮ, ಕಾಳಮ್ಮ, ದೊಣ್ಣೆಪ್ಪ ಹಾಗೂ ಸವರೆಪ್ಪ ಮೂರ್ತಿಗಳನ್ನು ಕಟ್ಟಿಗೆಯಲ್ಲಿ ನಿರ್ವಿುಸಿಕೊಂಡು ಸಂಪ್ರದಾಯದಂತೆ ಪೂಜೆ ನೆರವೇರಿಸಿ, ಮಂಗಳವಾರ ಬೆಳಗಿನ ಜಾವದಲ್ಲಿ ಬಾಳಂಬೀಡ ಭಾಗದ ಕೆರೆಯ ದಡದಲ್ಲಿ ಗಂಗಾ ಮಾತೆಗೆ ಅರ್ಪಿಸುತ್ತಾರೆ. ನಂತರ ವಿಶ್ವಕರ್ಮ ಅರ್ಚಕನ ಕನಸಿನಲ್ಲಿ ಬಂದು ತಿಳಿಸಿದಂತೆ ದುರ್ಗಾದೇವಿಯನ್ನು ಕೆರೆಯ ಏರಿ ಮೇಲೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅಂದಿನಿಂದ ದುರ್ಗಾದೇವಿ ಭಕ್ತರ ಕಷ್ಟ ಪರಿಹರಿಸುತ್ತ, ಇಷ್ಟಾರ್ಥ ಈಡೇರಿಸುತ್ತ ಇಲ್ಲಿ ನೆಲೆಸಿದ್ದಾಳೆ.