

ಹಿರೀಸಾವೆ: ಹೋಬಳಿಯ ವಿವಿಧ ದೇಗುಲಗಳಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.
ದೇಗುಲಗಳಿಗೆ ಹಸಿರು ಚಪ್ಪರ ಹಾಕಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿವಿಧ ಬಗೆಯ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಪೂಜಾ ಕಾರ್ಯಕ್ರಮ ಪ್ರಾರಂಭಗೊಂಡಿದ್ದು ಶಿವಲಿಂಗಕ್ಕೆ ಕುಂಕುಮಾರ್ಚನೆ, ಪುಷ್ಪಾರ್ಚನೆ ಹಾಗೂ ವಿವಿಧ ಅಭಿಷೇಕ ನೆರವೇರಿಸಲಾಯಿತು.
ಹಿರೀಸಾವೆಯ ಶೀ ಪಿಲ್ಲೇಶ್ವರ, ಕಬ್ಬಳಿಯ ಶ್ರೀ ಬಸವೇಶ್ವರಸ್ವಾಮಿ, ದಿಡಗ ಗ್ರಾಮದ ಬಾಣೇಶ್ವರ, ಉಳ್ಳಾವಳ್ಳಿಯ ಈಶ್ವರ, ಕರಿಕ್ಯಾತನಹಳ್ಳಿಯ ಕೋಡಿ ಭೈರವೇಶ್ವರ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿತು. ಭಕ್ತರು ಮುಂಜಾನೆಯಿಂದಲೇ ದೇಗುಲಗಳಿಗೆ ತೆರಳಿ ಹಣ್ಣು ಕಾಯಿ ಅರ್ಪಿಸಿ, ಗಂಧ ಕರ್ಪೂರ ಬೆಳಗಿಸಿ ದೇವರ ದರ್ಶನ ಪಡೆದರು.
ಹಿರೀಸಾವೆಯ ಮುದ್ರೆಕಲ್ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ 35 ಅಡಿ ಎತ್ತರದ ಆಂಜನೇಯ ಸ್ವಾಮಿ ವಿಗ್ರಹ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟು ಭೂಮಿ ಪೂಜೆ ನೆರವೇರಿಸಲಾಯಿತು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಂಬಿಕಾ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಮಲಾ ಉದಯಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಪ್ರಮೋದ್‌ಸೇರಿದಂತೆ ವಿವಿಧ ಗಣ್ಯರು ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಶಿವಲಿಂಗ ದರ್ಶನ ಪಡೆದರು.
ಬಹುತೇಕ ದೇಗುಲಗಳಲ್ಲಿ ರಾತ್ರಿ ಜಾಗರಣೆ ನಡೆಯಿತು. ಹರಿಕಥೆ, ಭಜನೆ, ಪೂಜೆ, ಜಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡವು. ಗುರುವಾರ ಮುಂಜಾನೆ ವಿಶೇಷ ಮಹಾ ಮಂಗಳಾರತಿ ಬೆಳಗಿಸಲಾಯಿತು. ಪ್ರಸಾದ-ವಿನಿಯೋಗ ಹಾಗೂ ಅನ್ನದಾಸೋಹ ನಡೆಯಿತು.