ದೇವತಾರಾಧನೆಯಿಂದ ಸರ್ವರಿಗೂ ಒಳಿತು

10-kk2(8-24
ಕಿಕ್ಕೇರಿ ಸಮೀಪದ ಬೆಡದಹಳ್ಳಿ ಪಂಚಭೂತೇಶ್ವರ ದೇಗುಲದಲ್ಲಿ ಸಾಮೂಹಿಕವಾಗಿ ಮುತ್ತೈದೆಯರು ಪತಿಗೆ ಪೂಜೆ ಸಲ್ಲಿಸಿದರು.
Published on

ಕಿಕ್ಕೇರಿ: ಸನಾತನ ಸಂಸ್ಕೃತಿಯಲ್ಲಿ ಒಂದಾದ ದೇವತಾರಾಧನೆಯಿಂದ ಸರ್ವರಿಗೂ ಒಳಿತಾಗಲಿದೆ ಎಂದು ಪಂಚಭೂತೇಶ್ವರ ಪೀಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು.

ಸಮೀಪದ ಬೆಡದಹಳ್ಳಿಯ ಪಂಚಭೂತೇಶ್ವರ ದೇಗುಲದಲ್ಲಿ ಇತ್ತೀಚೆಗೆ ನಡೆದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಣ್ಣಿಮೆ, ಅಮಾವಾಸ್ಯೆ ಸೃಷ್ಟಿಯ ನಿಯಮ. ಶಕ್ತಿದೇವರನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಭೀಮನ ಅಮಾವಾಸ್ಯೆಯಲ್ಲಿ ಮುತ್ತೈದೆಯರು ತಮ್ಮ ಪತಿಗೆ ಪಾದಪೂಜೆ ಮಾಡುವುದು ಸರ್ವಶ್ರೇಷ್ಠವಾಗಿದೆ. ಇಡೀ ಕುಟುಂಬದ ಸಾರಥಿಯಾದ ಯಜಮಾನನಿಗೆ ಒಳಿತಾಗಲಿ ಎಂದು ಪೂಜಿಸುವುದರಿಂದ ದೀರ್ಘಾಯಸ್ಸು, ಆರೋಗ್ಯ ಲಭಿಸಲಿದೆ ಎಂದರು.

ಪ್ರಕೃತಿ ಮುನಿದರೆ ಆಗುವ ಅನಾಹುತಗಳನ್ನು ಕಾಣುತ್ತಿದ್ದೇವೆ. ಪ್ರಕೃತಿ ಮಾತೆಯನ್ನು ಇರುವಂತೆ ಕಾಪಾಡುವುದು ಒಳಿತು. ದುರಾಸೆ, ಐಷಾರಾಮಿ ಬದುಕಿಗಾಗಿ ಬೆಟ್ಟ ಗುಡ್ಡ ಕಡಿದು, ಮನೆ, ರಸ್ತೆಗಳನ್ನು ನಿರ್ಮಿಸುವುದು ಇನ್ನಾದರೂ ನಿಲ್ಲಬೇಕು. ಪಂಚಭೂತಗಳಿಗೆ ತೊಂದರೆ ನೀಡಿದರೆ ಮನುಕುಲಕ್ಕೆ ಉಳಿಗಾಲವಿರಲಾರದು. ನದಿಮೂಲ, ಋತುಮಾನಗಳೇ ಬದಲಾಗುವಂತಾಗಿದೆ. ಅಕಾಲಿಕ ಮಳೆ, ಅತೀವೃಷ್ಟಿ, ಅನಾವೃಷ್ಟಿಗಳು ಬಾರದಂತೆ ಪ್ರಕೃತಿ ಸಂಪತ್ತನ್ನು ಕಾಪಾಡಬೇಕಿದೆ ಎಂದು ಎಚ್ಚರಿಸಿದರು.

ಪೂಜಾರಾಧನೆಯಲ್ಲಿ ದೈವಿಕ ಭಕ್ತಿ ಇರಲಿ. ದೇಶಿ ಗೋವುಗಳ ಸಂರಕ್ಷಣೆ, ರಾಸಾಯನಿಕ ಮುಕ್ತ ಬೇಸಾಯಕ್ಕೆ ಮುಂದಾಗಿ. ಜನಸಂಖ್ಯೆ ಹೆಚ್ಚಿದಂತೆ ಭೂಮಿ ಹೆಚ್ಚಲಾರದು ಎಂಬ ಪರಿಜ್ಞಾನ ಎಲ್ಲರೂ ಮೂಡಿ ಜಗತ್ತನ್ನು ಪ್ರೀತಿಸುವ ಜ್ಞಾನಿಗಳಾಗಲು ಮುಂದಾಗಿ ಎಂದು ನುಡಿದರು.
ಸಾಮೂಹಿಕವಾಗಿ ಮುತ್ತೈದೆಯರು ಪತಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಮಹಾಮಂಗಳಾರತಿ, ಅನ್ನಪ್ರಸಾದ ಸೇವೆ ಏರ್ಪಡಿಸಲಾಗಿತ್ತು.
ಕಾಡುಮೆಣಸ ಚಂದ್ರು, ಭಾರತೀಪುರ ಪುಟ್ಟಣ್ಣ, ಕೆ.ಎನ್. ಕಿರಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net