

ಶೃಂಗೇರಿ: ವೈಶಾಖ ಶುಕ್ಲ ಪಾಡ್ಯದಿಂದ ಪಂಚಮಿವರೆಗೆ ಏ.28ರಿಂದ ಮೇ 2ರ ವರೆಗೆ ಶ್ರೀಶಂಕರ ಜಯಂತಿ ಮಹೋತ್ಸವ ಪ್ರಯುಕ್ತ ಶ್ರೀಮಠದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ.
ಪ್ರತಿ ದಿನ ಬೆಳಗ್ಗೆ 8 ಗಂಟೆಯಿಂದ 12.30ರ ವರೆಗೆ ಶ್ರೀ ಶಂಕರಭಗತ್ಪಾದರ ಮೂರ್ತಿಗೆ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಚತುರ್ವೇದ-ಪ್ರಸ್ಥಾನತ್ರಯಭಾಷ್ಯ-ವಿದ್ಯಾರಣ್ಯವೇದಭಾಷ್ಯ-ಶ್ರೀಶಂಕರ ದಿಗ್ವಿಜಯ ಮೊದಲಾದ ಪಾರಾಯಣಗಳು, ಮಹಾಮಂಗಳಾರತಿ ನೆರವೇರಲಿದೆ.
ಸಂಜೆ ಐದು ಗಂಟೆಯಿಂದ ಎಂಟು ಗಂಟೆವರಗೆ ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವೇದ ಸ್ವಸ್ತಿವಾಚನ, ಶ್ರೀಶಂಕರ ದಿಗ್ವಿಜಯ ಪಾರಾಯಣ, ವಿದ್ವಾಂಸರಿಂದ ಉಪನ್ಯಾಸ, ಭಗವತ್ಪಾದರ ಮೂರ್ತಿಗೆ ಮಹಾ ಮಂಗಳಾರತಿ, ಅಷ್ಟಾವಧಾನಸೇವೆ, ಪ್ರಸಾದ ವಿನಿಯೋಗ ನೆರವೇರಲಿದೆ.
ಮೇ 2ರಂದು ಬೆಳಿಗ್ಗೆ 11.30ಕ್ಕೆ ಹರಿಹರನಾಮಾಲಯ ಉದ್ಘಾಟನೆ, ಮಧ್ಯಾಹ್ನ 12 ಗಂಟೆಯಿಂದ ಶ್ರೀಶಂಕರಭಗವತ್ಪಾದರಮೂರ್ತಿಗೆ ಯತಿವರ್ಯರಿಂದ ವಿಶೇಷ ಪೂಜೆ, ಮಹಾಮಂಗಳಾರತಿ, ಕನಕಾಭಿಷೇಕ ನಡೆಯಲಿದೆ. ಸಂಜೆ ಐದು ಗಂಟೆಗೆ ವೇದ ಸ್ತಸ್ವಿವಾಚನ ಮತ್ತು ಶ್ರೀಶಂಕರದಿಗ್ವಿಜಯ ಪಾರಾಯಣ, ಶ್ರೀಜಗದ್ಗುರುಗಳಿಂದ ಅನುಗ್ರಹ ಭಾಷಣ, ಭಗವತ್ಪಾದರ ಮೂರ್ತಿಗೆ ಮಹಾಮಂಗಳಾರತಿ, ಅಷ್ಟವಧಾನ ಸೇವೆ, ಪ್ರಸಾದ ವಿನಿಯೋಗ ನಡೆಯಲಿದೆ.
ಮೇ 3ರಂದು ಬೆಳಗ್ಗೆ 8.30ಕ್ಕೆ ಜಗದ್ಗುರುಗಳ ಸಾನಿಧ್ಯದಲ್ಲಿ ಶ್ರೀಶಂಕರಭಗವತ್ಪಾದರ ಮಹಾರಥೋತ್ಸವ ನಡೆಯಲಿದ್ದು , ಸಂಜೆ ಐದು ಗಂಟೆಗೆ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ಸಭೆ, ಪ್ರಾಸ್ತವಿಕ ನುಡಿಗಳು,ಅನುಗ್ರಹಭಾಷಣ, ವೇದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ನೆರವೇರಲಿದೆ.