

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಹಾರನಹಳ್ಳಿ ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಶ್ರೀ ಚನ್ನಕೇಶವ ಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ ಸಾನ್ನಿಧ್ಯದ ತ್ರಿಕೂಟಾಚಲ ದೇವಾಲಯದಲ್ಲಿ ನರಸಿಂಹ ಜಯಂತಿ ಆಚರಿಸಲಾಯಿತು.
ಸ್ವಾತಿ ನಕ್ಷತ್ರ ಪ್ರಯುಕ್ತ ಭಾನುವಾರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಸನ್ನಿಧಿಯಲ್ಲಿ ಬೆಳಗ್ಗೆ ಸುಪ್ರಭಾತ ಸೇವೆ ನಂತರ ಪಂಚಾಮೃತ ಅಭಿಷೇಕ, ಮಂಗಳದ್ರವ್ಯ ಅಭಿಷೇಕ, ಪವಮಾನ ಸೂಕ್ತ ಅಭಿಷೇಕ, ಮನ್ಯೂಸೂಕ್ತ ಅಭಿಷೇಕ, ಪುಷ್ಪಾಲಂಕಾರ, ಸಹಸ್ರನಾಮ ಸೇವೆ, ತುಳಸಿ ಅರ್ಚನೆ ನಂತರ ಮಹಾಮಂಗಳಾರತಿ ನೆರವೇರಿತು. ಬಳಿಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಪ್ರಕಾರ ಉತ್ಸವ, ತೀರ್ಥ ಪ್ರಸಾದ ಸೇವೆ ಜರುಗಿತು.
ಭಕ್ತಾದಿಗಳು ಆಗಮಿಸಿ ನರಸಿಂಹ ದೇವರ ದರ್ಶನ ಪಡೆದರು. ಇಸ್ಕಾನ್ ಭಕ್ತರಿಂದ ಹೂವಿನ ಸೇವೆ, ಅರಸೀಕೆರೆ ಮಂಜುನಾಥ್ ಕುಟುಂಬದವರಿಂದ ಪ್ರಸಾದ ಸೇವೆ ಆಯೋಜಿಸಲಾಗಿತ್ತು. ಲೋಕ ಶಿಕ್ಷಣ ಟ್ರಸ್ಟ್‌ನ ಮಾಜಿ ಕಾರ್ಯದರ್ಶಿ ಎಚ್.ಎಸ್.ನಾರಾಯಣ ಮೂರ್ತಿ, ಹಾರನಹಳ್ಳಿ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಡಿ.ವಿ.ಪುಟ್ಟಣ, ಎಚ್.ಆರ್.ಶಂಕರ್, ಮುರಳಿ ಮೋಹನ್ ಇತರರು ಇದ್ದರು.