

ಯಳಂದೂರು: ತಾಲೂಕಿನ ಪ್ರಸಿದ್ಧ ಕಂದಹಳ್ಳಿ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಮಾವಾಸ್ಯೆಯ ಪ್ರಯುಕ್ತ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪೂಜೆ, ನೈವೇದ್ಯ, ಹೋಮ, ಹವನ, ಪುಷ್ಪಾರ್ಚನೆ ಸೇರಿದಂತೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನೆರವೇರಿದವು.
ಭಕ್ತರು ಹುಲಿವಾಹನೋತ್ಸವ ಸೇವೆಯನ್ನು ನೆರವೇರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದ ರಥದಲ್ಲಿದ್ದ ಹುಲಿವಾಹನ, ಮಹದೇಶ್ವರ ಸ್ವಾಮಿಯ ಮೆರವಣಿಗೆಯೂ ದೇವಸ್ಥಾನದ ಉದ್ಘೋಷಗಳೊಂದಿಗೆ ಜರುಗಿತು. ಈ ಸಂದರ್ಭದಲ್ಲಿ ವಾದ್ಯ, ಸತ್ತಿಗೆ, ಸುರಪಾನಿ, ಮೇಳದೊಂದಿಗೆ ಮೆರವಣಿಗೆ ನೆರವೇರಿತು.
ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ: ಜಿಲ್ಲೆಯ ತಾಲೂಕಿನ ದುಗ್ಗಹಟ್ಟಿ, ಮೆಲ್ಲಹಳ್ಳಿ, ಅಂಬಳೆ, ಚಂಗಚಹಳ್ಳಿ, ಕೆಸ್ತೂರು, ಹೊನ್ನೂರು, ಯರಿಯೂರು, ಮದ್ದೂರು, ಗೌಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಸ್ಥಾನದ ವತಿಯಿಂದ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.