

ಗಂಡಸಿ: ಹೋಬಳಿಯ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಚಗಚಗೆರೆ ಶ್ರೀ ಉದ್ಭವ ಶನೈಶ್ಚರಸ್ವಾಮಿ ಅವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರಾವಣ ಮಾಸದ ಬೆನಕನ ಅಮಾವಾಸ್ಯೆ ಪ್ರಯುಕ್ತ ಶನಿವಾರ ಶ್ರೀ ಉದ್ಭವ ಶನೈಶ್ಚರಸ್ವಾಮಿ ಅವರಿಗೆ ಮಹಾಪುಷ್ಪಯಾಗ ವಿಶೇಷ ಪೂಜೆ ನೆರವೇರಿತು.
ಮಹಾಪುಷ್ಪಯಾಗದ ಪ್ರಯುಕ್ತ ಶ್ರೀ ಸ್ವಾಮಿ ಅವರ ಉತ್ಸವಮೂರ್ತಿ ಹಾಗೂ ಯಾಗಕ್ಕೆ ಶ್ರೀ ಸ್ವಾಮಿ ಅವರಿಗೆ ಅರ್ಪಿಸಲು ವಿವಿಧ ಬಗೆಯ ಹೂವಿನ ಬುಟ್ಟಿಗಳನ್ನು ಹೊತ್ತ ಮಹಿಳೆಯರನ್ನು ಮಂಗಳವಾದ್ಯದ ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀ ಸ್ವಾಮಿ ಅವರ ಮೂಲ ಸನ್ನಿಧಿ ಕರೆತರಲಾಯಿತು.
ಚಗಚಗೆರೆ ಶ್ರೀ ಕ್ಷೇತ್ರ ಧರ್ಮಧ್ವಜ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಕೃಷ್ಣಮೂರ್ತಿ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಸ್ವಾಮಿ ಅವರಿಗೆ ಗಣಪತಿ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ನಂತರ ಮಹಾಪುಷ್ಪಯಾಗ ನೆರವೇರಿಸಲಾಯಿತು. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಧ್ವಜ ಪ್ರತಿಷ್ಠಾನದ ಅಧ್ಯಕ್ಷ ಎಚ್. ಎ.ಅನಿಲ್, ಪ್ರಧಾನ ಅರ್ಚಕ ಆನಂದಸ್ವಾಮಿ, ಸದಸ್ಯರು, ಸದ್ಭಕ್ತರು, ಗ್ರಾಮಸ್ಥರು ಇದ್ದರು.