

ಕೆ.ಆರ್.ಪೇಟೆ: ಆಷಾಢ ಮಾಸದ ಮೂರನೇ ಶುಕ್ರವಾರದ ಅಂಗವಾಗಿ ಪಟ್ಟಣದ ಹೊರವಲಯದ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಪುರಸ್ಕಾರಗಳು ಸಡಗರ ಸಂಭ್ರಮದಿಂದ ನಡೆದವು.
ವೇದಬ್ರಹ್ಮ ರವಿಶಾಸ್ತ್ರಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನಡೆದವು. ತಾಯಿ ಚೌಡೇಶ್ವರಿಯ ಅಮ್ಮನವರ ಶಿಲಾಮೂರ್ತಿಯನ್ನು ವಿಶೇಷವಾಗಿ ಬೆಣ್ಣೆಯಿಂದ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಸಿಹಿ ಪೊಂಗಲ್, ಪುಳಿಯೋಗರೆ, ಮೊಸರನ್ನ ಪ್ರಸಾದವನ್ನು ವಿತರಿಸಲಾಯಿತು. ಮುತ್ತೈದೆಯರು ವಿಶೇಷವಾಗಿ ನಿಂಬೆಹಣ್ಣಿನ ದೀಪಗಳನ್ನು ಬೆಳಗಿ ಭಕ್ತಿಪೂರ್ವಕ ನಮನಗಳನ್ನ ಸಲ್ಲಿಸಿದರು.