ಕೊಳ್ಳೇಗಾಲದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ

ಕೊಳ್ಳೇಗಾಲ ಪಟ್ಟಣದ ನಡುಕಲ ಬೀದಿಯಲ್ಲಿ ನಗರ ಮಂಡಲ ಅಧ್ಯಕ್ಷ ರಮೇಶ್ ಮೂರಾರಿ ನೇತೃತ್ವದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾನ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು.
ಕೊಳ್ಳೇಗಾಲ ಪಟ್ಟಣದ ನಡುಕಲ ಬೀದಿಯಲ್ಲಿ ನಗರ ಮಂಡಲ ಅಧ್ಯಕ್ಷ ರಮೇಶ್ ಮೂರಾರಿ ನೇತೃತ್ವದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾನ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು.
Published on

ಕೊಳ್ಳೇಗಾಲ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಪನೆ ಅಂಗವಾಗಿ ಪಟ್ಟಣದ ವಿವಿಧ ದೇಗುಲಗಳಲ್ಲಿ ಸೋಮವಾರ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ರಾಮದೇವರಿಗೆ ಶ್ರೀರಾಮ ತಾರಕ ಹೋಮ ಮತ್ತು ಪವಿತ್ರ ಕಳಶಾಭಿಷೇಕ ಪೂಜೆ ಸಲ್ಲಿಸಲಾಯಿತು. ಭಾನುವಾರ ದೇವಾಂಗ ಪೇಟೆಯ ರಾಜ ಬೀದಿಗಳಲ್ಲಿ 108 ಕಳಶಗಳನ್ನು ಮೆರವಣಿಗೆ ಮಾಡಿ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಸೋಮವಾರ ಬೆಳಗ್ಗೆ 6.30ಕ್ಕೆ ಶ್ರೀರಾಮ ತಾರಕ ಹೋಮ ನೆರವೇರಿಸಲಾಯಿತು. ಶ್ರೀ ರಾಮಚಂದ್ರ, ಸೀತೆ, ಲಕ್ಷ್ಮಣ, ಶ್ರೀಆಂಜನೇಯನ ವಿಗ್ರಹಕ್ಕೆ ಕಳಶಾಭಿಷೇಕ, ಹಾಲು, ಮೊಸರು ವಿವಿಧ ಹೂ-ಹಣ್ಣಿನ ಅಭೀಷೇಕ ಮಾಡಲಾಯಿತು. ದೇವರ ಮೂರ್ತಿಗೆ ಅಲಂಕೃತಗೊಳಿಸಿದ ನಂತರ ಮಹಾಮಂಗಳಾರತಿ ನೆರವೇರಿತು. ಭಕ್ತರು ದೇವರ ದರ್ಶನ ಪಡೆದರು. ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಈ ವೇಳೆ ಭಕ್ತರಿಗೆ ಎಲ್‌ಇಡಿ ಪರದೆ ಮೂಲಕ ಅಯೋಧ್ಯೆಯ ರಾಮ ಮಂದಿರ ಉದ್ಘಾಟನಾ ಸಮಾರಂಭದ ವೀಕ್ಷಿಸಲು ಅವಕಾಶ ಮಾಡಲಾಗಿತ್ತು. ಮಾಜಿ ಶಾಸಕ ಎನ್.ಮಹೇಶ್, ಎಸ್.ಬಾಲರಾಜು, ಜಿ.ಎನ್.ನಂಜುಂಡಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ನಾಗರಾಜು ಸ್ವಾಮಿ, ವೆಂಕಟೇಶ್, ಶಿವಕುಮಾರ್ ನೆರವೇರಿಸಿದರು. ಶೆಟ್ಟಿಗಾರರು ಹಾಗೂ ದೇವಾಂಗ ಸಮಾಜದ ಮುಖಂಡರು ಇದ್ದರು.

ದೇವಾಂಗ ಪೇಟೆಯ ನಡುಕುಲ ಬೀದಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಹಾಗೂ ಶ್ರೀ ಮಕ್ಕಳ ಮಹದೇಶ್ವರ ದೇವಾಲಯ ಅರ್ಚಕ ರಮೇಶ್ ಮೂರಾರಿ ನೇತೃತ್ವದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ರಾಮ ಮಂದಿರದಲ್ಲಿ ಶ್ರೀರಾಮ ದೇವರಿಗೆ ಭಕ್ತಿ-ಭಾವದಿಂದ ಹೋಮ-ಹವನಗಳನ್ನು ನಡೆಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಕುಂಭಾಭಿಷೇಕ: ಕಾವೇರಿ ರಸ್ತೆಯಲ್ಲಿರುವ ನಾರಾಯಣಸ್ವಾಮಿ ಗುಡಿ ಬೀದಿಯಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ಶಕ್ತಿ ಗಣಪತಿ, ರಾಜರಾಜೇಶ್ವರಿ ದೇವಸ್ಥಾನ ನೂತನ ನವೀಕರಣ ಹಾಗೂ ಕುಂಭಾಭಿಷೇಕ ಕಾರ್ಯಕ್ರಮವು ಪ್ರಧಾನ ಅರ್ಚಕ ಟಿವಿಎಸ್ ರಾಘವನ್ ನೇತೃತ್ವದಲ್ಲಿ ಜರುಗಿತು. ಈ ವೇಳೆ ಪಟ್ಟಣದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶಿವಪ್ಪ ಸ್ವಾಮೀಜಿ, ಮೈಸೂರು ಹೊಸಹುಂಡಿ ನಾಗಪದ್ಮಾವತಿ ದೇವಾಲಯ ಸಂಸ್ಥಾಪಕ ಶ್ರೀನಾರಾಯಣ ಗುರೂಜಿ, ತುಮಕೂರು ಜಿಲ್ಲೆಯ ಹನುಮಂತಪುರದ ಶ್ರೀ ಲಕ್ಷ್ಮೀಶ್ವರಿ ಶಕ್ತಿ ಪೀಠದ ಡಾ. ನಾಗೇಂದ್ರ ಸ್ವಾಮೀಜಿ ಹಾಗೂ ಚಲನಚಿತ್ರ ನಟ ರಂಗಾಯಣ ರಘು ಮತ್ತಿತರರು ಪಾಲ್ಗೊಂಡಿದ್ದರು. ಉಳಿದಂತೆ ಶ್ರೀ ಕನ್ನಿಕಾ ಪರಮೇಶ್ವರಿ, ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ, ಶ್ರೀ ವರಸಿದ್ಧಿ ವಿನಾಯಕ, ಸತ್ತೇಗಾದಶ ಶ್ರೀ ಗವಿರಾಯಸ್ವಾಮಿ ದೇವಾಲಯ ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ: ನಂದಿನಿ ಡೇರಿ ವೃತ್ತದಲ್ಲಿರುವ ವಿವಿಧ ಅಂಗಡಿಗಳ ಮಾಲೀಕರಾದ ಗಿರೀಶ್, ದಿನೇಶ್ ಗುಪ್ತ, ಮಹದೇವ, ಗಿರಿವಾಸ್, ನಂಜುಂಡಸ್ವಾಮಿ, ಭಗತ್ ಸತ್ಯ ಇತರರು ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಿದರು. ದೇವಾಂಗ ಪೇಟೆಯ ಶ್ರೀ ಮದ್ದೇವಲ ಮಹರ್ಷಿ ಮಹಾದ್ವಾರ ಮುಂಭಾಗ ಶ್ರೀರಾಮದೇವರಿಗೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಲಾಯಿತು. ಈ ವೇಳೆ ಯುವ ಮುಖಂಡ ಗಿರೀಶ್ ಬಾಬು, ವಿಜಯ್ ಕುಮಾರ್, ಜಗದೀಶ್, ಮಧುಚಂದ್ರ ಇತರರು ಇದ್ದರು. ಅಂತೆಯೇ, ಹಲವೆಡೆ ಪ್ರಸಾದ ವಿನಿಯೋಗ ಮಾಡಲಾಯಿತು.

ಪಟ್ಟಣದಲ್ಲಿ ದೀಪಾಲಂಕಾರ: ಪಟ್ಟಣದ ದೇವಾಂಗ ಪೇಟೆ, ವಿಷ್ಣುವರ್ಧನ್ ರಸ್ತೆ, ಜಯ ಇನ್ಸ್‌ಟಿಟ್ಯೂಟ್ ರಸ್ತೆ, ಕನ್ನಿಕಾ ಪರಮೇಶ್ವರಿ ರಸ್ತೆ, ಮದ್ದೇವಲ ಮಹರ್ಷಿ ದ್ವಾರಗಳಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಭಾನುವಾರ ಹಾಗು ಸೋಮವಾರ ರಾತ್ರಿ ದೀಪಾಲಂಕಾರ ಜಗಮಗಿಸಿತು. ಎಲ್ಲೆಡೆ ಹಬ್ಬದ ಸಂಭ್ರಮ ಆವರಿಸಿತ್ತು. ಡಿವೈಎಸ್ಪಿ ಸೋಮೇಗೌಡ ನೇತೃತ್ವದಲ್ಲಿ ಪಟ್ಟಣ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net