ಶ್ರೀ ಪಾತಾಳೇಶ್ವರ ದೇಗುಲದಲ್ಲಿ ವಿಶೇಷ ಪೂಜೆ

ಶ್ರೀ ಪಾತಾಳೇಶ್ವರ ದೇಗುಲದಲ್ಲಿ ವಿಶೇಷ ಪೂಜೆ
Published on

ಬೇಲೂರು: ಮಹಾಶಿವರಾತ್ರಿ ಅಂಗವಾಗಿ ಬೇಲೂರು ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿರುವ ಶ್ರೀಪಾತಾಳೇಶ್ವರ ದೇಗುಲದಲ್ಲಿ ಅರ್ಚಕ ಕೆ.ಆರ್.ಮಂಜುನಾಥ್, ನೂರಾರು ಭಕ್ತರ ಸಮ್ಮುಖದಲ್ಲಿ ದೇವರಿಗೆ ಕ್ಷೀರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಗಂಗಾಭಿಷೇಕ, ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಮಹಾಶಿವರಾತ್ರಿ ಅಂಗವಾಗಿ ದೇಗುಲವನ್ನು ತಳಿರು ತೋರಣ ಹಾಗೂ ವಿವಿಧ ಪುಷ್ಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬುಧವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ಅರ್ಚಕರು ದೇಗುಲ ಟ್ರಸ್ಟ್ ಸಮಿತಿ ಪದಾಧಿಕಾರಿಗಳು ಪ್ರಥಮವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿಗೆ ಚಾಲನೆ ನೀಡಿದರು. ನಂತರ ನೂರಾರು ಭಕ್ತರು ಬೆಳಗ್ಗೆಯಿಂದ ರಾತ್ರಿ ಪೂರ್ತಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನೆರೆದಿದ್ದ ಭಕ್ತರಿಗೆ ದೇಗುಲ ಸಮಿತಿಯಿಂದ ಪ್ರಸಾದ ವಿತರಿಸಲಾಯಿತು.

ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಪೈಂಟ್ ರವಿ ಮಾತನಾಡಿ, ಮುಂದಿನ ದಿನಗಳಲ್ಲಿ ದೇವರ ಕಾರ್ಯದ ಜತೆಗೆ ಸಾಮಾಜಿಕ ಸೇವೆಗೆ ಮುಂದಾಗುತ್ತೇವೆ. ಕಳೆದ ಹತ್ತಾರು ವರ್ಷಗಳಿಂದ ಶ್ರೀ ಪಾತಾಳೇಶ್ವರ ಸೇವಾ ಸಮಿತಿ ಮಹಾ ಶಿವರಾತ್ರಿ ಮತ್ತು ಕಾರ್ತಿಕ ಮಾಸ ಪೂಜೆಯನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿತ್ತು. ಆದರೆ ಕಳೆದ ವರ್ಷದಿಂದ ಸಾಮಾಜಿಕ ಚಿಂತನೆಯೊಂದಿಗೆ ಶ್ರೀ ಪಾತಾಳೇಶ್ವರ ಸೇವಾ ಟ್ರಸ್ಟ್ ಆಗಿ ಮಾರ್ಪಾಡಾಗಿದೆ. ಟ್ರಸ್ಟಿನ ಮೂಲ ಉದ್ದೇಶ ದೇವರ ಕಾರ್ಯದ ಜತೆಗೆ ಸಾಮಾಜಿಕ ಕಳಕಳಿಯೊಂದಿಗೆ ಮುಂದಿನ ದಿನಗಳಲ್ಲಿ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡುವುದಕ್ಕೆ ಮುಂದಾಗಲಿದ್ದೇವೆ. ಇದರಿಂದಾಗಿ ಈ ಸೇವಾ ಟ್ರಸ್ಟನ್ನು ಬೃಹತ್ ಮಟ್ಟಕ್ಕೆ ಬೆಳೆಸುವ ಶಕ್ತಿಯನ್ನು ಆ ಪಾತಾಳೇಶ್ವರ ದೇವರು ಕಲ್ಪಿಸಲಿ ಹಾಗೂ ಮಹಾಶಿವರಾತ್ರಿ ಹಬ್ಬದ ಪೂಜೆಯ ವಿಶೇಷವಾಗಿ ಕೆಂಪೇಗೌಡ ಮುಖ್ಯ ರಸ್ತೆಯ ಎರಡು ಬದಿಗೂ ಸಂಪೂರ್ಣ ವಿದ್ಯುತ್ ಅಲಂಕಾರ ಮಾಡುವುದರೊಂದಿಗೆ ಸ್ಥಳೀಯ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಭರತನಾಟ್ಯ, ಭಜನೆ, ಪ್ರವಚನ ಹಾಗೂ ಮುಂದಿನ ದಿನಗಳಲ್ಲಿ ಗಿರಿಜಾ ಕಲ್ಯಾಣ ಮಾಡುತ್ತೇವೆ. ಈ ಶಿವರಾತ್ರಿಯೂ ಪ್ರತಿಯೊಬ್ಬರಿಗೂ ಶಾಂತಿ ನೆಮ್ಮದಿ ಸೌಹಾರ್ದತೆ ನೀಡುವುದರ ಮೂಲಕ ಭಗವಂತ ಪ್ರತಿಯೊಬ್ಬರನ್ನು ಕಾಪಾಡಲಿ ಎಂದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯ ಬಿ.ಸಿ.ಜಗದೀಶ್ ಮಾತನಾಡಿ, ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನ ಆರಾಧನೆ ಪ್ರತಿಯೊಬ್ಬರಿಗೂ ಮುಖ್ಯವಾಗಿದ್ದು, ಇದರ ಅಂಗವಾಗಿ ಶನಿವಾರ ಬೆಳಗ್ಗೆಯಿಂದಲೇ ಪಾತಾಳೇಶ್ವರ ದೇವಾಲಯದಲ್ಲಿ ದೇವರಿಗೆ ಸಂಕಲ್ಪ ಪೂಜೆ ಮಾಡಲಾಗಿದೆ ಎಂದರು.

ಅರ್ಚಕ ಕೆ.ಆರ್.ಮಂಜುನಾಥ್, ಪಾತಾಳೇಶ್ವರ ದೇಗುಲ ಟ್ರಸ್ಟ್ ಖಜಾಂಚಿ ಕುಮಾರಸ್ವಾಮಿ, ಕಾರ್ಯದರ್ಶಿ ಕೃಷ್ಣಕುಮಾರ್, ನಿರ್ದೇಶಕ ಪುಟ್ಟಸ್ವಾಮಿಗೌಡ, ಬಸವರಾಜು, ನಾಗರಾಜು, ಯಲ್ಲೇಶ್, ಮಂಜುನಾಥ್, ಬೇಕರಿ ಮಂಜು, ಶರತ್, ರವಿ, ನಂದೀಶ್, ಮಂಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net