

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜನ್ಮದಿನ ಹಾಗೂ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಲಿ ಎಂದು ನಗರದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರಲ್ಹಾದ ಜೋಶಿ ಸಾಕಷ್ಟು ಜನಪರ ಕಾರ್ಯ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾಗಿ ಕೇಂದ್ರ ಸರ್ಕಾರದಲ್ಲಿ ಉನ್ನತ ಸ್ಥಾನ ಹೊಂದುವ ಮೂಲಕ ಕ್ಷೇತ್ರದ ಜನರಿಗೆ ಇನ್ನಷ್ಟು ಸೇವೆ ಸಿಗಲಿ. ಇದಲ್ಲದೆ 2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿ ದೇಶವನ್ನು ಮತ್ತಷು ಎತ್ತರಕ್ಕೆ ಕೊಂಡೊಯ್ಯಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಇದೇ ಸಮಯದಲ್ಲಿ ನುಗ್ಗಿಕೇರಿ ಆಂಜನೇಯ ದೇವಸ್ಥಾನ ಆವರಣದಲ್ಲಿ ರಕ್ತದಾನ ಶಿಬಿರ ಸಹ ಏರ್ಪಡಿಸಲಾಗಿತ್ತು. ನೂರಾರು ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಸಚಿವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಮಾಜಿ ಶಾಸಕ ಅಮೃತ ದೇಸಾಯಿ, ಕ್ಷಮತಾ ಸೇವಾ ಸಂಸ್ಥೆ ಅಧ್ಯಕ್ಷ ಗೋವಿಂದ ಜೋಶಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಈರಣ್ಣ ಹಪ್ಪಳಿ, ಮಂಡಲ ಅಧ್ಯಕ್ಷ ಸುನೀಲ ಮೋರೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕೋಟ್ಯಾನ, ಹರೀಶ ಬಿಜಾಪುರ, ಪಾಲಿಕೆ ಸದಸ್ಯರಾದ ನಿತಿನ್ ಇಂಡಿ, ಶಂಕರ ಶೇಳಕೆ, ಆನಂದ ಯಾವಗಲ, ಅನಿತಾ ಚಳಗೇರಿ, ಮುಖಂಡರಾದ ಟಿ.ಎಸ್. ಪಾಟೀಲ, ರಾಜೇಶ್ವರಿ ಅಳಗವಾಡಿ, ಮಾಲತಿ ಬರಗಿ, ರಾಕೇಶ ನಾಝರೆ, ಸುಮಿತ್ರಾ ಬಡಿಗೇರ, ಶೋಭಾ ಜಾಧವ, ಶಕ್ತಿ ಹಿರೇಮಠ, ವಿನಾಯಕ ಗೊಂದಳಿ, ರಾಹುಲ ಮಲ್ಲಿಗವಾಡ, ರಾಜೇಶ ಚಾಂದಗುಡೆ, ಇತರರು ಇದ್ದರು.