ಪ್ರಧಾನಿ ಮೋದಿ ಸುತ್ತ ವಿಶೇಷ ಸೈನ್ಯ

sgp
Published on

ಶ್ರವಣ್‌ಕುಮಾರ್ ನಾಳ ಮಂಗಳೂರು

ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದ ರೂಪುರೇಷೆಗಳ ಬಗ್ಗೆ ವಿಶೇಷ ಭದ್ರತಾ ಪಡೆಯಿಂದ ಈವರೆಗೆ ವಿವರಗಳು ಲಭ್ಯವಾಗಿಲ್ಲ.

ಭದ್ರತೆ ದೃಷ್ಟಿಯಿಂದ ಇಡೀ ಕಾರ್ಯಕ್ರಮ ಹಾಗೂ ಮಂಗಳೂರಿನ ಪರಿಸ್ಥಿತಿಯನ್ನು ಅವಲೋಕಿಸದೆ ಎಸ್‌ಪಿಜಿ(ವಿಶೇಷ ಭದ್ರತಾ ಪಡೆ) ಅನುಮತಿ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಎಸ್‌ಪಿಜಿಯ ಗುಪ್ತ ದಳ 2 ದಿನಗಳಿಂದ ಗೌಪ್ಯವಾಗಿ ಮಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಭದ್ರತಾ ಮಾಹಿತಿ ಕಲೆ ಹಾಕುತ್ತಿದೆ.

ಪ್ರಧಾನ ಮಂತ್ರಿಗಳ ಭದ್ರತೆಗೆಂದೇ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಕಾಯ್ದೆ 1988ರ ಅನ್ವಯ 1988ರಲ್ಲಿ ಸ್ಥಾಪಿಸಲಾಗಿದೆ. ಇದು ಪ್ರಧಾನಿಯ ಪ್ರವಾಸದ ಸಮಗ್ರ ನಿರ್ವಹಣೆ ಮಾಡುತ್ತದೆ. ಈ ಪಡೆೆಯ ಅನುಮತಿಯಿದ್ದರೆ ಮಾತ್ರ ಪ್ರಧಾನಿ ಹಾಗೂ ಅವರ ಕುಟುಂಬಸ್ಥರಿಗೆ ದೇಶ ಹಾಗೂ ವಿದೇಶ ಪ್ರವಾಸ ಕೈಗೊಳ್ಳಲು ಸಾಧ್ಯ. ಸೆ.2ರಂದು ಮಂಗಳೂರಿಗೆ ಮೋದಿ ಆಗಮನ ಹಿನ್ನೆಲೆಯಲ್ಲಿ ಈಗಾಗಲೇ ಮಂಗಳೂರಿನಲ್ಲಿ 2 ದಿನದಿಂದ ಬೀಡುಬಿಟ್ಟಿರುವ ಎಸ್‌ಪಿಜಿ ಗುಪ್ತವಾರ್ತೆ ಮತ್ತು ಪ್ರವಾಸ ವಿಭಾಗವು ಪ್ರಧಾನಿ ತಲುಪಬೇಕಾದ ಸ್ಥಳದ ಬಗೆಗಿನ ಮಾಹಿತಿ, ಸ್ಥಳೀಯ ಸನ್ನಿವೇಶ, ಭದ್ರತಾ ಏರ್ಪಾಡುಗಳ ಬಗ್ಗೆ ನವದೆಹಲಿಯಲ್ಲಿರುವ ಎಸ್‌ಪಿಜಿ ನಿರ್ವಹಣಾ ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ಅವರಿಗೆ ಮಾಹಿತಿ ರವಾನಿಸುತ್ತಿದೆ.

ಕಾರ್ಯಾಚರಣಾ ವಿಭಾಗ ಆಗಮನ: ಎಸ್‌ಪಿಜಿ ಕಾರ್ಯಾಚರಣಾ ವಿಭಾಗದ ಮೂರು ಉಪವಿಭಾಗಗಳಾದ ಸಂವಹನ, ತಾಂತ್ರಿಕತೆ ಮತ್ತು ಸಾರಿಗೆ ತಂಡ ಮಂಗಳೂರಿಗೆ ಆಗಮಿಸಲಿವೆ. ಎಸ್‌ಪಿಜಿ ಗುಪ್ತವಾರ್ತೆ ಮತ್ತು ಪ್ರವಾಸ ವಿಭಾಗದ ಸಂಪೂರ್ಣ ಮಾಹಿತಿ ವಿಮರ್ಶಿಸಿ ಪ್ರಧಾನಿ ಪ್ರವಾಸಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಅವಲೋಕಿಸುವ ಕಾರ್ಯ ನಡೆಸುತ್ತದೆ. ಸೋಮವಾರ ಎಸ್‌ಪಿಜಿ ಸಂವಹನ ತಂಡ ಆಗಮಿಸಿದೆ. ಮಂಗಳವಾರ ತಾಂತ್ರಿಕತೆ ಮತ್ತು ಸಾರಿಗೆ ತಂಡ ಆಗಮಿಸಲಿದೆ. ಬುಧವಾರ ವಿಶೇಷ ಭದ್ರತಾ ಪಡೆೆ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ.

ಏನಿದು ಎಸ್‌ಪಿಜಿ?: 1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ಪ್ರಧಾನಿ ಭದ್ರತೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಉದ್ದೇಶದಿಂದ ಭದ್ರತೆ ಜವಾಬ್ದಾರಿಯನ್ನು ವಿಶೇಷ ಕಾರ್ಯಪಡೆಗೆ ವಹಿಸಲಾಯಿತು. ಭದ್ರತೆಗೆ ಸಂಬಂಧಿಸಿ 1985ರಲ್ಲಿ ಬೀರಬಲ್ ನಾಥ್ ಸಮಿತಿಯನ್ನು ಕೇಂದ್ರ ಗೃಹ ಸಚಿವಾಲಯವು ರಚಿಸಿ ವಿಶೇಷ ಸಂರಕ್ಷಣಾ ಘಟಕ (ಎಸ್‌ಪಿಯು) ಅಸ್ತಿತ್ವಕ್ಕೆ ತರಲಾಯಿತು. ಇದಕ್ಕಾಗಿ ಸಂಪುಟ ಕಾರ್ಯದರ್ಶಿ ಅಧೀನದಲ್ಲಿ 801ರಷ್ಟು ಹುದ್ದೆಗಳನ್ನು ಸೃಷ್ಟಿಸಲಾಯಿತು. ನಂತರ ಇದಕ್ಕೆ ಎಸ್‌ಪಿಜಿ ಎಂದು ಪದನಾಮ ನೀಡಲಾಯಿತು. ಘಟಕದ ಮುಖ್ಯಸ್ಥರಾದ ಇನ್ಸ್‌ಪೆಕ್ಟರ್ ಜನರಲ್ ಆ್ ಪೊಲೀಸ್(ಐಜಿಪಿ) ಹುದ್ದೆಯನ್ನು ನಿರ್ದೇಶಕ ಎಂದು ಬದಲಾಯಿಸಲಾಯಿತು. ಹೀಗೆ 1985 ಏ.8ರಂದು ವಿಶೇಷ ಭದ್ರತಾ ಪಡೆಯು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು.

ಹೇಗಿರುತ್ತದೆ ಭದ್ರತೆ?: ಮಂಗಳೂರಿನಲ್ಲಿ ಪ್ರಧಾನಿ ಭದ್ರತೆಗೆ ಎಸ್‌ಪಿಜಿ ಬೃಹತ್ ರಕ್ಷಣಾ ವ್ಯೆಹ ರಚಿಸಲು ಯೋಜನೆ ರೂಪಿಸಿದೆ. ಎಸ್‌ಪಿಜಿಯ ಆಂತರಿಕ 4 ತಂಡಗಳ ಪೈಕಿ ಕಾರ್ಯಾಚರಣಾ, ಗುಪ್ತವಾರ್ತೆ ಮತ್ತು ಪ್ರವಾಸ ವಿಭಾಗ ತಂಡ ನೇರ ಹಾಗೂ ಪರೋಕ್ಷವಾಗಿ ಕಾರ್ಯಾಚರಣೆಗಿಳಿಯಲಿದೆ. ವಿಮಾನ ನಿಲ್ದಾಣ ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ 60 ಶಸಸಜ್ಜಿತ ಅಧಿಕಾರಿಗಳು ಪ್ರಧಾನಿಯನ್ನು ಸುತ್ತುವರಿಯಲಿದ್ದಾರೆ. ಈ ಗುಂಪಿನಲ್ಲಿ, ಶಸ್ತ್ರಸಜ್ಜಿತ ಬಿಎಂಡಬ್ಲ್ಯು ಆಧುನಿಕ ಸರಣಿಯ ಸೆಡಾನ್ ಕಾರು, ಶಸ್ತ್ರಸಜ್ಜಿತ ರೇಂಜ್ ರೋವರ್, ಬಿಎಂಡಬ್ಲ್ಯು ಎಕ್ಸ್ 5ಗಳು, ಟೊಯೋಟಾ ಫಾರ್ಚೂನರ್ಸ್, ಲ್ಯಾಂಡ್ ಕ್ರೂಸರ್‌ಗಳು ಮತ್ತು ಮರ್ಸಿಡಿಸ್ ಬೆಂಜ್ ಸ್ಪ್ರಿಂಟರ್ ಆಂಬುಲೆನ್ಸ್‌ಗಳು ಇರುತ್ತವೆ. ಈ ವಾಹನಗಳ ಮಧ್ಯೆ ಗುಣಮಟ್ಟದ ಸೆನ್ಸರ್‌ಗಳು, ಸಿಗ್ನಲ್ ಜಾಮರ್‌ಗಳನ್ನು ಹೊಂದಿರುವ ಟಾಟಾ ಸಫಾರಿ ಸ್ಟೋರ್ಮ್ ವಾಹನವೂ ಸಾಗುತ್ತದೆ. ಜತೆಗೆ ಸುಧಾರಿತ ಸ್ಫೋಟಕ ಸಾಧನ, ರಾಕೆಟ್ ಪ್ರೊಪೆಲ್ಡ್ ಗ್ರನೇಡ್ ಮತ್ತು ಆಂಟಿ ಟ್ಯಾಂಕ್ ಕ್ಷಿಪಣಿಗಳನ್ನು ಹಾಗೂ ಅತ್ಯಾಧುನಿಕ ಇಡಬ್ಲ್ಯೂ ರಾಡಾರ್ ಸಂವೇದಕಗಳನ್ನು ಈ ವಾಹನದ ಮೇಲ್ಭಾಗದಲ್ಲಿ ಜೋಡಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net