ಆದಿಮದಿಂದ ರಂಗಭೂಮಿಗೆ ವಿಶೇಷ ಆದ್ಯತೆ

11 KLR 08
Published on

ಕೋಲಾರ: ಆದಿಮ ಕೇಂದ್ರ ಆರಂಭದಿಂದಲೂ ಈ ನೆಲದ ಸಂಸತಿಗೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಸಮಾಜಮುಖಿಯಾಗಿ ತನ್ನದೇ ಅದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ವಿಶಿಷ್ಟವಾಗಿ ಬೆಳೆದು ಬಂದಿದೆ ಎಂದು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರುದ್ರೇಶ್​ ಅದರಂಗಿ ತಿಳಿಸಿದರು.

ಕೋಲಾರ ತೇರಹಳ್ಳಿ ಬೆಟ್ಟದ ಆದಿಮ ಸಾಂಸತಿಕ ಕೇಂದ್ರದಲ್ಲಿ 220ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ರಂಗಭೂಮಿಯ ಚರಿತ್ರೆಯನ್ನು ಗಮನಿಸಿದಾಗ ಪೌರಾಣಿಕ ರಂಗ ತಂಡಗಳು, ಸಾಮಾಜಿಕ ರಂಗ ತಂಡಗಳು ಇದ್ದವು. ಸರಿಯಾದ ತರಬೇತಿ ನೀಡುವ ನಿಟ್ಟಿನಲ್ಲಿ ನಿನಾಸಂ ಎಂಬ ರಂಗ ಶಿಕ್ಷಣ ಕೇಂದ್ರವನ್ನು ಕೆ.ವಿ.ಸುಬ್ಬಣ್ಣ ಹೆಗ್ಗೋಡಿಯಲ್ಲಿ ಆರಂಭಿಸಿದ್ದರು. ಹಲವು ಕಲಿಕಾ ಶಿಸ್ತುಗಳ ಮೂಲಕ ಅದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದುಕೊಂಡಿತು. ಅದೇ ರೀತಿ 2006ರಲ್ಲಿ ಆದಿಮ ಆರಂಭವಾಗಿ ರಂಗಭೂಮಿಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಬೇರೆ ಬೇರೆ ಭಾಗಗಳಿಂದ ಕಲಾವಿದರು, ನಿರ್ದೇಶಕರು ಆದಿಮ ತಂಡದಲ್ಲಿ ಗುರುತಿಸಿಕೊಂಡು ಹೋಗಿದ್ದಾರೆ ಎಂದರು.

ಆದಿಮದಲ್ಲಿ ಪರಿಪೂರ್ಣವಾದ ರಂಗಶಾಲೆ ಆಗಬೇಕಿತ್ತು ಎನ್ನುವ ಕನಸನ್ನು ಆದಿಮ ಅಧ್ಯಕ್ಷ ಮುನಿಸ್ವಾಮಿ, ಕಾರ್ಯದರ್ಶಿ ಹ.ಮಾ.ರಾಮಚಂದ್ರ ಹಾಗೂ ಎಲ್ಲರೂ ಸೇರಿ ನನಸಾಗಿಸಿದ್ದಾರೆ. ರಂಗಭೂಮಿಯನ್ನು ಚಿಮ್ಮುವ ಹಲಗೆಯಾಗಿ ಬಳಸಿಕೊಳ್ಳದೆ, ಹತ್ತುವ ಏಣಿಯಾಗಿ ಮಾಡಿಕೊಂಡು ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಅಗ್ರಹಾರ ರಮೇಶ್​ ಮಾತನಾಡಿ, ಆದಿಮ, ರಂಗ ಶಿಕ್ಷಣ ಕೇಂದ್ರ ಆಗಬೇಕು ಎನ್ನುವುದು ಬಹುದಿನಗಳ ಕನಸಾಗಿತ್ತು. ಅದರಂತೆ ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಬಂದು ಕಲಿಕೆಯಲ್ಲಿ ತೊಡಗಿದ್ದಾರೆ. ಭಾನುವಾರವೂ ಸೇರಿ ಶನಿವಾರ ತರಬೇತಿ ನಡೆಯುತ್ತಿದೆ. 15 ದಿನಗಳ ಹಿಂದೆ ಹಿರಿಯ ಸಾಹಿತಿಗಳು, ನಾಟಕಕಾರರು ಆದ ಡಾ.ರಾಜಪ್ಪ ದಳವಾಯಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್​ ಬೋಧನಾ ಪ್ರಕ್ರಿಯೆಗೆ ಚಾಲನೆ ನೀಡಿದರು. ಒಂದು ವರ್ಷದ ಕಲಿಕೆಗೆ ಸಂಸ್ಥೆ ಸುಮಾರು 30 ಲಕ್ಷ ರೂ.ಗೂ ಹೆಚ್ಚು ವೆಚ್ಚ ಮಾಡಲಿದೆ. ಪ್ರಾಂಶುಪಾಲರಾಗಿ ರಾಷ್ಟ್ರೀಯ ನಾಟಕ ಶಾಲೆ ಪದವೀಧರ ಜಗದೀಶ್​ ಆರ್​ ಜಾಣಿ, ಉಪನ್ಯಾಸಕರಾಗಿ ಗ.ನ.ಅಶ್ವತ್​ ನೀನಾಸಂ ಹಾಗೂ ತಾಂತ್ರಿಕ ಸಹಾಯಕರಾಗಿ ತುರಾಂಡಹಳ್ಳಿ ಶ್ರೀನಿವಾಸ್​ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಸ್ಥಳಿಯ ನುರಿತ ರಂಗಕರ್ಮಿಗಳಿಗೂ ಸಹ ಇಲ್ಲಿ ಉಪನ್ಯಾಸ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಆದಿಮ ತಂಡದಿಂದಲೇ ನಾಟಕ ಪ್ರದರ್ಶನಗಳು ನೀಡಲಾಗುತ್ತದೆ. ಆದಿಮ ರಂಗ ಶಿಕ್ಷಣ ಕೇಂದ್ರ ಆಗಲು ಅನೇಕರು ಕಾರಣಕರ್ತರಾಗಿದ್ದಾರೆ ಎಂದು ಆಶಿಸಿದರು.

ಆದಿಮ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಆದಿಮ ಆಶಯ ಗೀತೆ ಹಾಡಿದರು. ಕೋಲಾಟ, ಕಳರಿ ಪಯಟ್ಟು ಪ್ರದರ್ಶಿಸಿದರು. ತರಬೇತಿ ನೀಡಿದವರು ಕೇರಳದ ವಿನೋದ್​ ಕಡಂಗಳ್​. ಆದಿಮ ಕೇಂದ್ರ ಪ್ರಸ್ತುತಪಡಿಸಿದ ನಾಟಕ ಶಿವಶರಣ ಹರಳಯ್ಯ ಪ್ರದರ್ಶನಗೊಂಡಿತು.

ಅರಿವು ಡಾ. ಶಿವಪ್ಪ, ಬಾಲಾಜಿ ಪ್ರಿಂರ್ಟಸ್​ ಶ್ರೀನಿವಾಸ್​, ಮಣಿ. ಸುನೀಲ್​, ಶಿಕ್ಷಕ ಅಮಿತ್​, ನಾಯಕ್​, ನಾರಾಯಣಸ್ವಾಮಿ, ಹರೀಶ್​ ಆದಿಮ ಇದ್ದರು.

11 ಕೆ.ಎಲ್​.ಆರ್​. 08

ಆದಿಮ ರಂಗ ಕೇಂದ್ರದಲ್ಲಿ ವಿದ್ಯಾರ್ಥಿಗಳು ಶಿವಶರಣ ಹರಳಯ್ಯ ನಾಟಕ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net