

ಗೋಕರ್ಣ: ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆಯವರು ಇಲ್ಲಿ ವಿಶೇಷವಾಗಿ ಸಂಘಟಿಸಿರುವ ಮಹಾರುದ್ರ ಮಹಾಯಾಗದ ಎರಡನೆ ದಿನ ಗುರುವಾರ ರುದ್ರ ಪಠಣ ಪ್ರಾರಂಭದಲ್ಲಿ ಪ್ರಧಾನಿ ಮೋದಿ ಅವರ ಸ್ವಕ್ಷೇತ್ರ ವಾರಣಾಸಿ ಕ್ಷೇತ್ರ ಪುರೋಹಿತ ವಿದ್ವಾನ್ ಆನಂದ ಗಣೇಶ ಭಟ್ಟ ಅವರಿಂದ ವಿಶೇಷ ಪ್ರಾರ್ಥನೆ ಮತ್ತು ಪ್ರವಚನ ನಡೆಯಿತು.
ಪ್ರವಚನದಲ್ಲಿ ದೇಶದ ಅನೇಕ ಕಡೆಗಳಲ್ಲಿ ಪರಶಿವನ ಮಂದಿರಗಳಿವೆ. ಆದರೆ ಭೂಮಿಯಲ್ಲಿ ಈಶ್ವರನ ಏಕಮೇವ ಆತ್ಮಲಿಂಗವನ್ನು ಕಾಣುವ ಭಾಗ್ಯ ಗೋಕರ್ಣದಲ್ಲಿ ಮಾತ್ರವಿದೆ. ಹೀಗಾಗಿ ಇಲ್ಲಿ ಮಾಡುವ ಪೂಜಾರಾಧನೆ ಮತ್ತು ಪ್ರಾರ್ಥನೆ ಯಾವತ್ತೂ ವ್ಯರ್ಥವಾಗದೆ ಸರ್ವ ಸಿದ್ಧಿಯನ್ನು ನೀಡುತ್ತವೆ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಪುನಃ ಬಿಜೆಪಿ ಸರ್ಕಾರ ಮತ್ತು ಮತ್ತೊಮ್ಮೆ ಮೋದಿ ಅವರು ಪ್ರಧಾನಿ ಆಗುವುದಕ್ಕೆ ಮಹಾರುದ್ರಯಾಗದಿಂದ ವಿಶೇಷ ಶಕ್ತಿ ಮತ್ತು ಸಿದ್ಧಿ ಲಭಿಸಿ ಅನಂತಮೂರ್ತಿ ಹೆಗಡೆ ಅವರ ಇಚ್ಛಿತ ಮನೋಕಾಮನೆಗಳು ಪೂರ್ಣರೂಪ ಪಡೆದು ಬಯಸಿದ ಉತ್ತಮ ಸ್ಥಾನ ಒದಗಿ ಬರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವದಿಸಿದರು.
ಹಿರಿಯ ಆಗಮ ವಿದ್ವಾಂಸ ಕೃಷ್ಣ ಭಟ್ಟ ಷಡಕ್ಷರಿ,ವಿದ್ವಾನ್ ಪರಮೇಶ್ವರ ಮಾರ್ಕಾಂಡೆ ಪೂರ್ವಾಗ ಪೂಜೆ ನಡೆಸಿದರು.ಅನಂತಮೂರ್ತಿ ಹೆಗಡೆ ದಂಪತಿ, ಬಿಜೆಪಿ ಪ್ರಮುಖ ಕುಮಾರ ಮಾರ್ಕಾಂಡೆ ಮತ್ತು ನೂರಾರು ವೇದವಿದರು ಭಾಗವಹಿಸಿದರು.