

ಮಡಿಕೇರಿ: ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆ ಮತ್ತು ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕು ಎಂದು ನಗರದ ಬದ್ರಿಯಾ ಮಸೀದಿಯಲ್ಲಿ ಮುಸಲ್ಮಾನ ಬಾಂಧವರು ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಧರ್ಮ ಗುರುಗಳಾದ ಹಾಫಿಲ್ ನೌಫಾಲ್ ಸಕಾಫಿ ಅವರ ನೇತೃತ್ವದಲ್ಲಿ ದೇಶದ ಶಾಂತಿ ಸೌಹಾರ್ದತೆಗಾಗಿ ಮತ್ತು ಭಾರತೀಯ ಸೇನೆಯ ಸೈನಿಕರ ಒಳಿತಿಗಾಗಿ ಮುಸಲ್ಮಾನರು ಪ್ರಾರ್ಥಿಸಿದರು.
ಈ ಸಂದರ್ಭ ಮಾತನಾಡಿದ ಬದ್ರಿಯಾ ಮಸೀದಿಯ ಅಧ್ಯಕ್ಷ ಅಮೀನ್ ಮೊಹಿಸಿನ್ ಅವರು, ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಭಾರತೀಯ ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕು ಮತ್ತು ಶ್ರೇಯೋಭಿವೃದ್ಧಿಯಾಗಬೇಕೆಂದು ಸರ್ವ ಮುಸಲ್ಮಾನರು ಇಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ. ದೇಶವನ್ನು ಬಲಪಡಿಸುವ ನಿಟ್ಟಿನಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು, ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಒಗ್ಗಟ್ಟನ್ನು ಕಾಯ್ದುಕೊಳ್ಳಲು ಪ್ರಾರ್ಥಿಸಲಾಯಿತು ಎಂದು ತಿಳಿಸಿದರು.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತಿಯ ಸೈನಿಕರು ದಾಳಿ ನಡೆಸಿದ್ದು, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಆ ಮೂಲಕ ಭಾರತ ಯಾವುದೇ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಸೈನ್ಯದ ದಂಡಾಧಿಕಾರಿಗಳು ರಾಷ್ಟ್ರ ಬದ್ಧತೆ ಹಾಗೂ ಧೈರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದರಿಂದ ಭಾರತದ ಜನತೆಗೆ ಹೆಚ್ಚಿನ ಶಕ್ತಿ ಮತ್ತು ಧೈರ್ಯ ಬಂದಿದೆ. ಈ ಸನ್ನಿವೇಶವನ್ನು ಎಲ್ಲಾ ಭಾರತೀಯರು ಒಕ್ಕೊರಲಿನಿಂದ ಸಂಭ್ರಮಿಸಬೇಕು. ಮುಂದೆಯೂ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಸೌಹಾರ್ದತೆಯ ಪರಂಪರೆ ಮುಂದುವರೆಯಬೇಕು. ಒಗ್ಗಟ್ಟಿನ ಬೆಳವಣಿಗೆ ದೇಶಕ್ಕೆ ವಿಜಯವನ್ನು ತಂದುಕೊಡುತ್ತದೆ ಎಂದು ಅಮೀನ್ ಮೊಹಿಸಿನ್ ಅಭಿಪ್ರಾಯಪಟ್ಟರು.
ಬದ್ರಿಯಾ ಮಸೀದಿಯ ಉಪಾಧ್ಯಕ್ಷ ಇಸ್ಮಾಯಿಲ್, ಮದ್ರಸ ಪ್ರಾಂಶುಪಾಲರಾದ ಹನೀಫ್ ಧಾರಿಮಿ, ನಗರಸಭಾ ಸದಸ್ಯ ಮನ್ಸೂರ್ ಮತ್ತಿತರರು ಉಪಸ್ಥಿತರಿದರು.