

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಬಾದಾಮಿ ಅಮಾವಾಸ್ಯೆ ಹಿನ್ನೆಲೆಯ್ಲಲಿ ಬುಧವಾರ ಸಂಜೆ ಸ್ವಾಮಿಗೆ ಎಣ್ಣೆಮಜ್ಜನ ಸೇವೆಯನ್ನು ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಮಾವಾಸ್ಯೆ ಅಂಗವಾಗಿ ದೇಗುಲವನ್ನು ವಿವಿಧ ಪುಷ್ಪ, ತಳೀರು ತೋರಣದಿಂದ ಸಿಂಗರಿಸಲಾಗಿತ್ತು. ಜತೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇಗುಲದಲ್ಲಿ ಸಂಜೆ 6.30 ರಿಂದ ರಾತ್ರಿ 8.30ರವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಮಾದಪ್ಪನಿಗೆ ವಿವಿಧ ಅಭಿಷೇಕ ನೆರವೇರಿಸಿದರು. ಬಳಿಕ ಎಣ್ಣೆಮಜ್ಜನ ಸೇವೆ ನೆರವೇರಿಸಿ ಧೂಪ, ದೀಪದಾರತಿ ಹಾಗೂ ಮಹಾಮಂಗಳಾರತಿ ಬೆಳಗಿಸಲಾಯಿತು.
ಸಂಜೆ 7ರಲ್ಲಿ ಜರುಗಿದ ಚಿನ್ನದ ತೇರಿನ ಉತ್ಸವದಲ್ಲಿ ಹೆಚ್ಚಿನ ಭಕ್ತರು ಭಾಗಿಯಾಗಿದ್ದು, ಹರಕೆ ಹೊತ್ತ ಭಕ್ತರು ದೇಗುಲದ ಸುತ್ತ ದಂಡಿನ ಕೋಲನ್ನು ಹೊತ್ತು ಪ್ರದಕ್ಷಿಣೆ ಹಾಕುವುದರ ಮೂಲಕ ಸ್ವಾಮಿ ಕೃಪೆಗೆ ಪಾತ್ರರಾದರು. ಈ ವೇಳೆ ಭಕ್ತರು ಮಹದೇಶ್ವರ ಸ್ವಾಮಿಗೆ ಜಯಘೋಷಗಳನ್ನು ಮೊಳಗಿಸಿದರು.
ಉತ್ಸವಗಳಲ್ಲಿ ಭಕ್ತರು ಭಾಗಿ: ಮ.ಬೆಟ್ಟಕ್ಕೆ ಆಗಮಿಸಿದ ಹರಕೆ ಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆ (ದೇಗುಲದ ಸುತ್ತ ಕಸ ತೆಗೆಯುವ ಕಾರ್ಯ) ಕೈಗೊಂಡು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಅಲ್ಲದೆ ಕೆಲವು ಭಕ್ತರು ದೇಗುಲದ ಸುತ್ತ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನ ಉತ್ಸವದಲ್ಲಿ ಭಾಗಿಯಾದರು. ಈ ವೇಳೆ ಭಕ್ತರು ಜಯಘೋಷಗಳನ್ನು ಮೊಳಗಿಸಿದರು. ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು.
ಚಾ.ನಗರ ಸೇರಿದಂತೆ ಮೈಸೂರು, ಮಂಡ್ಯ, ರಾಮನಗರ, ಚನ್ನಪಟ್ಟಣ ಹಾಗೂ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇದರಲ್ಲಿ ಶಕ್ತಿ ಯೋಜನೆಯ ಪರಿಣಾಮ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಗುರುವಾರ ಬಾದಾಮಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.
ಭಕ್ತರಿಗೆ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅನ್ನ ದಾಸೋಹ, ಕುಡಿಯುವ ನೀರು ಸೇರಿದಂತೆ ಇನ್ನಿತರ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿತ್ತು.