ಸುರಕ್ಷಿತವಾಗಿ ಭೂಮಿಗೆ ಮರಳಲಿ ಸುನೀತಾ ವಿಲಿಯಮ್ಸ್​...

Sugunendra
Published on

ಪರ್ಯಾಯ ಸುಗುಣೇಂದ್ರ ಶ್ರೀ ಹಾರೈಕೆ

ಉಡುಪಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ಮತ್ತು ಸಹ ಗಗನಯಾತ್ರಿ ಬುಚ್​ ವಿಲ್ಮೋರ್​ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಮರಳಿ ಬರಲಿ. ನಮ್ಮ ಅಭಿಮಾನಿಯೂ ಆಗಿರುವ ಸುನೀತಾ ಮರಳಿ ಬರುತ್ತಿರುವುದು ಕೇಳಿ ಸಂತಸವಾಗಿದೆ. ನಿರ್ವಿಘ್ನವಾಗಿ ಭೂಮಿಗೆ ಮರಳಿ ಅವರ ಸಾಧನೆ ಚಿರಸ್ಥಾಯಿ ಆಗಬೇಕು ಎಂದು ಉಡುಪಿ ಶ್ರೀಕೃಷ್ಣನಿಗೆ ವಿಶೇಷ ಪೂಜೆಯೊಂದಿಗೆ ಪ್ರಾರ್ಥಿಸಿದ್ದಾಗಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ದೇಶ-ವಿದೇಶದಲ್ಲೂ ವೇದ ಪಠಣ

ಸುನೀತಾ ಅವರು ಮತ್ತೆ ಯಾವುದೇ ಅಪಾಯಕ್ಕೆ ಒಳಗಾಗದೆ ಮರಳುವಂತಾಗಲು ದೇವರ ಆಶೀರ್ವಾದ ಕೋರಿ ಭಾರತ ಮತ್ತು ವಿದೇಶದಲ್ಲಿ ಇರುವ ಪುತ್ತಿಗೆ ಮಠದ ಶಾಖೆಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತಿದೆ. ಉಡುಪಿಯಲ್ಲೂ ಸಹ ವೇದ ಪಠಣ ನಡೆಸಲಾಗಿದೆ ಎಂದು ತಿಳಿಸಿದರು.

ಅಮೆರಿಕ, ಆಸ್ಟ್ರೇಲಿಯಾ, ಯುನೈಟೆಡ್​ ಕಿಂಗ್​ಡಮ್​ ಮತ್ತು ಕೆನಡಾದಲ್ಲಿರುವ ದೇವಾಲಯಗಳಲ್ಲಿ ಪ್ರಾರ್ಥನಾ ಸಮಾರಂಭ ಸಂಯೋಜಿಸಿದ್ದೇವೆ. ನ್ಯೂಜೆರ್ಸಿ, ಡಲ್ಲಾಸ್​, ಲಾಸ್​ ಏಂಜಲೀಸ್​, ಹೂಸ್ಟನ್​, ಷಿಕಾಗೋ ನಗರಗಳಲ್ಲಿರುವ ದೇವಾಲಯ ಹಾಗೂ ಮೆಲ್ಬೋರ್ನ್​, ಲಂಡನ್​, ಟೊರೊಂಟೊದಲ್ಲಿರುವ ಶಾಖೆಗಳಲ್ಲೂ ಸುನೀತಾ ಅವರಿಗಾಗಿ ಪ್ರಾರ್ಥನೆ ಸಲ್ಲಿಸುವಂತೆ ಸಂದೇಶ ಕಳುಹಿಸಲಾಗಿದೆ ಎಂದು ಸುಗುಣೇಂದ್ರ ಶ್ರೀ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net