ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ

ಮಳವಳ್ಳಿ ಪಟ್ಟಣದ ಮೈಸೂರು ಮುಖ್ಯರಸ್ತೆಯ ಕಾರ್ಖಾನೆ ಸಮೀಪ ಅಂಗಡಿ ಮಾಲೀಕರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು.
ಮಳವಳ್ಳಿ ಪಟ್ಟಣದ ಮೈಸೂರು ಮುಖ್ಯರಸ್ತೆಯ ಕಾರ್ಖಾನೆ ಸಮೀಪ ಅಂಗಡಿ ಮಾಲೀಕರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು.
Published on

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ಪ್ರಮುಖ ದೇವಾಲಯಗಳಲ್ಲಿ ಕೊನೆಯ ಆಷಾಢ ಶುಕ್ರವಾರ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.

ಪಟ್ಟಣದ ಗಂಗಾಧರೇಶ್ವರ, ಕೋಟೆ ಕಾಳಮ್ಮ, ಸಾರಂಗಪಾಣಿ, ಮೂಲೇ ಗಣೇಶ, ಮದ್ದೂರು ರಸ್ತೆ ಬದಿಯಲ್ಲಿರುವ ಮಹದೇಶ್ವರ, ದಂಡಿನ ಮಾರಮ್ಮ, ಪಟ್ಟಲದಮ್ಮ ಹಾಗೂ ಹೊರವಲಯದಲ್ಲಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ದೇವರ ಮೂರ್ತಿಗಳನ್ನು ವಿವಿಧ ಹೂಗಳಿಂದ ಅರ್ಚಕರು ಅಲಂಕಾರಗೊಳಿಸುವುದರ ಜತೆಗೆ ವಿಶೇಷ ಪೂಜೆ ನೆರವೇರಿಸಿದರು.

ದೇವಾಲಯಗಳಿಗೆ ನವ ದಂಪತಿ, ಪಟ್ಟಣದ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನಸಮೂಹ ಆಗಮಿಸಿ ಪೂಜೆ ಸಲ್ಲಿಸಿ ದರ್ಶನ ಪಡೆಯಿತು. ಪಟ್ಟಣದ ಮೈಸೂರು ಮುಖ್ಯರಸ್ತೆಯ ತಾಲೂಕು ಪಂಚಾಯಿತಿ ಸಮೀಪ ಆಟೋ ಚಾಲಕ ಮತ್ತು ಮಾಲೀಕರ ಸಂಘ ಹಾಗೂ ಕಾರ್ಖಾನೆ ಶಾಲೆ ಬಳಿ ಅಂಗಡಿ ಮಾಲೀಕರು ಚಾಮುಂಡೇಶ್ವರಿ ಕಂಚಿನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಪಟ್ಟಣದ ವಿವಿಧ ಬಡಾವಣೆಗಳಿಂದ ನೂರಾರು ಜನರು ಆಗಮಿಸಿ ದೇವಿಯ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ನೆರೆದವರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ತಾಲೂಕಿನ ಮುತ್ತತ್ತಿ ಆಂಜನೇಯ, ಬಸವನ ಬೆಟ್ಟದ ಹೆಬ್ಬಟ್ಟದ ಬಸವೇಶ್ವರ, ಕಲ್ಕುಣಿ ವಿಜಯ ನಗರೇಶ್ವರಿ, ಮಹಾಶಕ್ತಿ ಮಂಚದ ಕಾಳಿಕಾಂಬ, ತೆಂಕಹಳ್ಳಿ ಸಮೀಪದ ಶನೈಶ್ಚರ, ಪೂರಿಗಾಲಿ ಪಾತಾಳೇಶ್ವ, ಸರಗೂರು ಸಮೀಪದ ಮಹದೇಶ್ವರ, ಬೆಳಕವಾಡಿ ಕಾಶಿ ವಿಶ್ವನಾಥ, ಗೌಡಗೆರೆ ಗ್ರಾಮದಲ್ಲಿರುವ ಬಸವೇಶ್ವರ, ಮತ್ತಿತಾಳೇಶ್ವರ, ಹಿಟ್ಟನಹಳ್ಳಿ ಸಮೀಪದ ಮಾರಮ್ಮ, ಮಿಕ್ಕೆರೆ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯ ಸಾಂಗವಾಗಿ ನೆರೆವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net