

ಗಜೇಂದ್ರಗಡ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶುಕ್ರವಾರ ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಯಿತು.
ಮನೆಗಳಲ್ಲಿ ಲಕ್ಷ್ಮೀ ಮೂರ್ತಿ ಪ್ರತಿಷ್ಠಾಪಿಸಿ ಸೀರೆ ಉಡಿಸಿ, ಬಗೆ ಬಗೆಯ ಹೂ ಹಾಗೂ ಆಭರಣಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಜನರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು. ಮನೆಯಲ್ಲಿ ಬಗೆ ಬಗೆಯ ಭಕ್ಷ್ಯವನ್ನು ತಯಾರಿಸಿ ಹಬ್ಬದೂಟ ಸವಿದರು. ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣುಗಳ ಬೆಲೆ ಹೆಚ್ಚಾಗಿತ್ತು. ಆದರೂ ಯಾವುದನ್ನೂ ಲೆಕ್ಕಿಸದೆ ಜನರು ಹಬ್ಬವನ್ನು ಸಡಗರದಿಂದ ಆಚರಿಸಿದರು. ಸಂಜೆ ವೇಳೆ ಮನೆಯಲ್ಲಿ ಲಕ್ಷ್ಮೀಗೆ ದೀಪದಾರತಿ ಮಾಡಿ ಪೂಜೆ ಸಲ್ಲಿಸಿ, ನೆರೆ ಹೊರೆಯ ಮುತ್ತೈದೆಯರಿಗೆ ಉಡಿ ತುಂಬಿ ಸಂಭ್ರಮಿಸಿದರು.