

ಶಿರಸಿ: ಮರು ಸಮೀಕ್ಷೆಯಲ್ಲಿ ಗುರುತಿಸಲಾದ ಎಂಡೋಸಲ್ಪಾನ್ ಬಾಧಿತ 830 ಜನರಿಗೆ ಯುಡಿಐಡಿ ಕಾರ್ಡ್ ನೀಡಲು ಕ್ರಮ ಕೈಗೊಳ್ಳುವಂತೆ ಕೋರಿ ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಜಿಲ್ಲಾ ಉಸ್ತುವಾರಿ ಸಚಿವ ಮಂಕ್ಝಾ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಶಿರಸಿಗೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ವೆಂಕಟೇಶ ನಾಯ್ಕ, ಮುಂದಿನ ಹಂತಗಳಲ್ಲಿ 18 ವರ್ಷ ಒಳಗಿನ ಎಂಡೋ ಬಾಧಿತರಿಗೆ ನಿರಂತರವಾಗಿ 2 ತಿಂಗಳುಗಳ ಕಾಲ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಯೋಜನೆ ರೂಪಿಸಿದ್ದೇವೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ, ಸಿದ್ದಾಪುರಗಳಲ್ಲಿ ಹಂತ ಹಂತವಾಗಿ ನೀಡಲಾಗುವ ಪಿಸಿಯೋಥೆರಪಿ ಚಿಕಿತ್ಸೆಗೆ ಅಗತ್ಯ ಸ್ಥಳಾವಕಾಶ ಮಾಡಿಕೊಡಲು ಕೋರಿದರು. ಮನವಿ ಸ್ವೀಕರಿಸಿದ ಸಚಿವರು ಎಂಡೋಸಲ್ಪಾನ್ ಬಾಧಿತರಿಗೆ ಅವಶ್ಯವಿರುವ ಎಲ್ಲ ಸಹಕಾರ, ಸಹಾಯ ನೀಡುವುದಾಗಿ ಭರವಸೆ ನೀಡಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಡಾ. ವೆಂಕಟೇಶ ನಾಯ್ಕ, ಅಂದಾಜು 650 ಎಂಡೋಸಲ್ಪಾನ್ ಬಾಧಿತರಿಗೆ ವೈದ್ಯಕೀಯ ಸಲಕರಣೆ, ಫಿಸಿಯೋಥೆರಪಿ ಚಿಕಿತ್ಸೆ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುವ ಯೋಜನೆಯನ್ನು ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಸ್ಕೊಡ್ವೆಸ್ನ ಎಂಡೋಸಲ್ಪಾನ್ ಕಾರ್ಯಕ್ರಮದ ಸಂಯೋಜಕ ಸೂರ್ಯ ಗುಂಡು ಇದ್ದರು.