ಕರಾವಳಿಗೆ ವಿಶೇಷ ಪ್ಯಾಕೇಜ್, ಕಂದಾಯ ಸಚಿವ ಆರ್.ಅಶೋಕ ಮಾಹಿತಿ

web
Published on

ಉಡುಪಿ/ಪಡುಬಿದ್ರಿ: ಕರಾವಳಿಯಲ್ಲಿ ಚಂಡಮಾರುತ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಸಮಗ್ರ ವರದಿ ನೀಡಿ, ಕರಾವಳಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಜಿಲ್ಲೆಯ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಹಲವು ಮನೆಗಳು ಭಾಗಶಃ, ಪೂರ್ಣವಾಗಿ ಹಾನಿಯಾಗಿದ್ದು, ಸಂತ್ರಸ್ತರಿಗೆ ಎರಡು ದಿನದ ಒಳಗೆ ತುರ್ತು ಪರಿಹಾರ 10 ಸಾವಿರ ರೂ. ನೀಡಲಾಗುವುದು. ಮನೆಗಳು, ತೋಟ, ರಸ್ತೆ, ಮೀನುಗಾರಿಕಾ ಬೋಟ್ ಸೇರಿದಂತೆ ಪ್ರಾಥಮಿಕ ವರದಿ ಪ್ರಕಾರ 68 ಕೋಟಿ ರೂ. ಅಂದಾಜು ಮೌಲ್ಯದ ಹಾನಿ ಸಂಭವಿಸಿದೆ. ಮುಖ್ಯಮಂತ್ರಿ ಜತೆ ಚರ್ಚಿಸಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಡಲುಕೊರೆತ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಿದ್ದ ಕಲ್ಲುಗಳು ಕೊಚ್ಚಿಹೋಗಿವೆ. ತಡೆಗೋಡೆ ನಿರ್ಮಿಸಲು ಕಲ್ಲುಗಳ ಸಾಗಾಟಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕರಾದ ಸುನೀಲ್‌ಕುಮಾರ್, ಕೆ.ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಲಾಲಾಜಿ ಆರ್.ಮೆಂಡನ್ ಮೊದಲಾದವರು ಇದ್ದರು.

ಮರವಂತೆ ರಸ್ತೆ ನಿರ್ಮಾಣಕ್ಕೆ 12 ಕೋಟಿ ರೂ.:

ಗಂಗೊಳ್ಳಿ: ಚಂಡಮಾರುತ ಮತ್ತು ಕಡಲ್ಕೊರೆತದಿಂದ ಮರವಂತೆಯಲ್ಲಿ ಒಂದು ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆ ಸಮುದ್ರ ಪಾಲಾಗಿದೆ. ಈ ರಸ್ತೆ ಪುನರ್ ನಿರ್ಮಾಣಕ್ಕೆ 12 ಕೋಟಿ ರೂ.ತಗಲುವ ಸಾಧ್ಯತೆ ಇದೆ ಎಂದು ಸಚಿವ ಆರ್.ಅಶೋಕ ಅಂದಾಜಿಸಿದರು. ಮರವಂತೆ ಮೀನುಗಾರಿಕಾ ಹೊರಬಂದರು ಸಮೀಪದ ಪ್ರದೇಶವನ್ನು ಮಂಗಳವಾರ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಭಾಗದಲ್ಲಿ ಆಗಿರುವ ಹಾನಿಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು. ಮಳೆಗಾಲ ಸಮೀಪಿಸುತ್ತಿರುವುದರಿಂದ ಇಲ್ಲಿ ತುರ್ತು ಕಾಮಗಾರಿ ಆರಂಭಿಸಲಾಗುವುದು ಎಂದರು.

ಗಡಿಬಿಡಿ ಭೇಟಿಗೆ ಮೀನುಗಾರರು ಸಿಡಿಮಿಡಿ: ಕಡಲ್ಕೊರೆತ ಪ್ರದೇಶಗಳಿಗೆ ಕಂದಾಯ ಸಚಿವರ ತುರಾತುರಿ ಭೇಟಿ ಬಗ್ಗೆ ಸ್ಥಳೀಯ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರಲ್ಲಿ ಅಸಹಾಯಕತೆ ತೋಡಿಕೊಂಡ ಸ್ಥಳೀಯ ಮೀನುಗಾರ ಮುಖಂಡರು, ಚಂಡಮಾರುತದಿಂದ ಶೆಡ್, ರಸ್ತೆ ಹಾಗೂ ತೆಂಗಿನಮರಗಳನ್ನು ಕಳೆದುಕೊಂಡಿದ್ದೇವೆ. ಸಚಿವರು ನಮಗೆ ಸಾಂತ್ವನ ಹೇಳಿಲ್ಲ. ಮಾತನಾಡುವ ಸೌಜನ್ಯವನ್ನೂ ತೋರಿಲ್ಲ. ನಮ್ಮ ಬೇಡಿಕೆಗಳನ್ನು ಆಲಿಸಿದೆ ವಾಪಾಸಾಗಿದ್ದಾರೆ. ನಮ್ಮ ಮನೆಗಳು ಸಮುದ್ರ ಪಾಲಾಗುತ್ತವೆಂಬ ಭಯದಿಂದ ನಾವೇ ಮರಳಿನ ಚೀಲಗಳನ್ನು ತಡೆಗೋಡೆಯಾಗಿ ಮಾಡಿಕೊಂಡಿದ್ದೇವೆ. ಮುಂದೆ ಜನಪ್ರತಿನಿಧಿಗಳು ಮರವಂತೆ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದರೆ ನಾವ್ಯಾರು ಬರುವುದಿಲ್ಲ. ಮೀನುಗಾರರ ಜ್ವಲಂತ ಸಮಸ್ಯೆಗಳ ಕುರಿತು ಸಚಿವರು ಪರಿಶೀಲನೆ ನಡೆಸಿಲ್ಲ. ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಫೋಟೋಗೆ ಪೋಸ್ ಕೊಟ್ಟು ಹೋಗುವುದಾ? ಇವರೇನು ಶೋಕಿ ಮಾಡಲು ಬಂದಿದ್ದಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net