ಭೂ ಕುಸಿತ ಪರಿಹಾರ, ಹಾನಿಗೆ ವಿಶೇಷ ಪ್ಯಾಕೇಜ್

katariya
ಗುಡ್ಡೆ ತೋಟದಲ್ಲಿ ಭೂಕುಸಿತವಾದ ಪ್ರದೇಶದ ನಿವಾಸಿಗಳಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯ ಮಾಹಿತಿ ಪಡೆದರು. ಟಿ.ಡಿ.ರಾಜೇಗೌಡ, ಡಿ.ಬಿ.ರಾಜೇಂದ್ರ, ಕೀರ್ತಿರಾಜ್ ಇತರರಿದ್ದರು.
Published on

ಜಯಪುರ:ಅತಿಯಾದ ಮಳೆಯಿಂದಾಗಿ ಮಲೆನಾಡಿನ ಕೆಲವು ಭಾಗಗಳಲ್ಲಿ ಅನೇಕ ಅನಾಹುತ ಆಗುತ್ತಿದೆ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಹಾನಿ ಪರಿಹಾರ, ದುರಸ್ತಿಗೆ ವಿಶೇಷ ಪ್ಯಾಕೇಜ್ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯ ಹೇಳಿದರು.

ಶುಕ್ರವಾರ ಮೇಗುಂದಾ ಹೋಬಳಿ ಗುಡ್ಡೆತೋಟದ 17 ಮನೆಗಳ ಸಮೀಪ ಭೂ ಕುಸಿತವಾಗಿರುವುದನ್ನು ವೀಕ್ಷಿಸಿ ಮಾತನಾಡಿ, ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಗುಡ್ಡೆತೋಟದ 17 ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಪರ್ಯಾಯ ಜಾಗವನ್ನು ಕೆಲವೇ ದಿನಗಳಲ್ಲಿ ಗುರುತಿಸಲಾಗುವುದು ಎಂದರು.
ಪದೇ ಪದೆ ಭೇಟಿ ನೀಡುವ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಆಶ್ವಾಸನೆ ನೀಡುತ್ತಿದ್ದಾರೆಯೆ ಹೊರತು ಕೆಲಸ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಕಟಾರಿಯ, ನಾನು ಮುಂದಿನ ಬಾರಿ ಬಂದಾಗ ಈ ಬಗ್ಗೆ ಕೇಳುವ ಅವಶ್ಯಕತೆ ಇರುವುದಿಲ್ಲ. ಎಲ್ಲದಕ್ಕೂ ಸೂಕ್ತ ಹಾಗೂ ಶಾಶ್ವತ ಪರಿಹಾರ ಮಾಡಿಕೊಡುತ್ತೇನೆ ಎಂದರು. ನಂತರ ಹೆಗ್ಗಾರುಕುಡಿಗೆ ಮತ್ತು ಹುತ್ತಿನಗದ್ದೆ ರಸ್ತೆ ಕುಸಿತವಾದ ಪ್ರದೇಶಕ್ಕೆ ಭೇಟಿ ನೀಡಿದರು.
ಕಳೆದ ವರ್ಷ ಮಳೆಯಿಂದ ಕುಸಿದಿದ್ದ ನೇರಳಕೊಡಿಗೆ ರಾಜ್ಯ ಹೆದ್ದಾರಿಯನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ವೀಕ್ಷಿಸಿದರು. ಪಟ್ಟಣದಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ನೇರಳಕೊಡಿಗೆ ಹೆದ್ದ್ದಾರಿ ಬೇಗಾರು, ಕಮ್ಮರಡಿ, ತೀರ್ಥಹಳ್ಳಿ, ಉಡುಪಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಕುಸಿತದ ಮಾಹಿತಿ ಪಡೆದುಕೊಂಡು ಮಾತನಾಡಿದ ಕಟಾರಿಯಾ, ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಿ ತುರ್ತಾಗಿ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಬಳಿಕ ತಾಲೂಕು ಕಚೇರಿಗೆ ಭೇಟಿ ನೀಡಿದರು. ಶಾಸಕ ಟಿ.ಡಿ.ರಾಜೇಗೌಡ, ತಹಸೀಲ್ದಾರ್ ಗೌರಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net