ವಿಶೇಷ ಪ್ಯಾಕೇಜ್: ಸಿಎಂಗೆ ಎಎಪಿ ಮನವಿ

BOJANNA SOMAIHA
Published on

ಮಡಿಕೇರಿ: ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಅವರು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಅವರು ಅತಿಯಾದ ಮಳೆ ಮತ್ತು ವನ್ಯಜೀವಿಗಳ ದಾಳಿಯಿಂದ ಕೊಡಗಿನ ಜನರಿಗೆ ಆಗುತ್ತಿರುವ ಕಷ್ಟನಷ್ಟದ ಕುರಿತು ವಿವರಿಸಿದ ಅವರು, ರಾಜಕೀಯ, ನೈಸರ್ಗಿಕ ಮತ್ತು ಆಡಳಿತಾತ್ಮಕ ಎಂಬ ಮೂರು ರೀತಿಯ ಸಮಸ್ಯೆಗಳು ಕೊಡಗು ಜಿಲ್ಲೆಯನ್ನು ಅತಿಯಾಗಿ ಕಾಡುತ್ತಿವೆ. ಹಿಂದೆ ಮೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದ ಜಿಲ್ಲೆ ಇಂದು ಕೇವಲ ಎರಡು ಕ್ಷೇತ್ರಗಳಿಗೆ ಸೀಮಿತಗೊಂಡು ಒಂದು ಕ್ಷೇತ್ರದಿಂದ ವಂಚಿತಗೊಂಡಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದ್ದು, ಮತ್ತೆ ಮೂರು ವಿಧಾನಸಭಾ ಕ್ಷೇತ್ರಗಳನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.

ಗುಡ್ಡಗಾಡು, ನದಿತೊರೆಗಳ ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರತಿವರ್ಷ ಅತಿವೃಷ್ಟಿಯಿಂದ ಭೂಕುಸಿತ ಮತ್ತು ಪ್ರವಾಹ ಸಂಭವಿಸಿ ಸಾಕಷ್ಟು ಹಾನಿಯಾಗುತ್ತಿದೆ. ರಸ್ತೆಗಳೆಲ್ಲವೂ ಹದಗೆಟ್ಟು ಸಂಚಾರ ವ್ಯವಸ್ಥೆಗೆ ತೊಂದರೆಯಾಗುತ್ತಿದೆ. ಇದರೊಂದಿಗೆ ವನ್ಯಜೀವಿಗಳ ದಾಳಿ ನಿರಂತರವಾಗಿದೆ. ಹುಲಿ, ಆನೆ, ಮಂಗಗಳ ಹಾವಳಿ ಮಿತಿ ಮೀರಿದೆ, ಕ್ರೂರ ಮೃಗಗಳಿಂದ ಜಾನುವಾರುಗಳು ಬಲಿಯಾಗುತ್ತಿವೆ. ಕಾಡಾನೆ ಮತ್ತು ಮಂಗಗಳಿಂದ ರೈತರು ಬೆಳೆದ ಫಸಲು ನಷ್ಟವಾಗುತ್ತಿದೆ, ಅಲ್ಲದೆ ಆನೆಯಿಂದ ಜೀವಕ್ಕೂ ಹಾನಿಯಾಗುತ್ತಿದೆ. ಹಾವಾಗುಣದ ವೈಪರೀತ್ಯ ಹಾಗೂ ವನ್ಯಜೀವಿಗಳ ದಾಳಿಯಿಂದ ಇಳುವರಿ ಕಡಿಮೆಯಾಗುತ್ತಿದೆ. ಈ ಸಮಸ್ಯೆಗಳನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು ಎಂದು ಕೋರಿದರು.

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಹಳೇ ಮೈಸೂರು ಭಾಗದ ಹೆಚ್.ಡಿ.ಕೋಟೆ, ಮೈಸೂರು ಹಾಗೂ ಚಾಮರಾಜನಗರ ಪ್ರದೇಶಗಳಿಗೆ ಸುಮಾರು ೩,೬೦೦ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯನ್ನು ಕೂಡ ವಿಶೇಷವಾಗಿ ಪರಿಗಣಿಸಿ ದೊಡ್ಡ ಮೊತ್ತದ ವಿಶೇಷ ಪ್ಯಾಕೇಜ್ ನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net