ಗೋಕರ್ಣದಲ್ಲಿ ಮಾದಕ ದ್ರವ್ಯ ಪತ್ತೆಗೆ ವಿಶೇಷ ಕಾರ್ಯಾಚರಣೆ

gkn KARYACHARANE
Published on

ಗೋಕರ್ಣ: ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವಿಧ್ವಂಸಕ ನಿಗ್ರಹ ತಂಡದೊಂದಿಗೆ ಇಲ್ಲಿನ ವಿವಿಧ ಶಂಕಿತ ಸ್ಥಳಗಳಲ್ಲಿ ವ್ಯಾಪಕ ತಪಾಸಣೆ ನಡೆಸಲಾಯಿತು.

ಈ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಜಿಲ್ಲಾ ಶ್ವಾನದಳ ಬಳಸಿಕೊಂಡಿರುವುದು ವಿಶೇಷವಾಗಿದೆ. ಗೋಕರ್ಣ, ಬೇಲೆಹಿತ್ತಲು, ಬಿಜ್ಜೂರು, ಬೇಲೆಕಾನು ಭಾಗದಲ್ಲಿನ ಅಂಗಡಿ, ಮನೆ, ವಸತಿಗೃಹ, ರೆಸಾರ್ಟ್ ಮತ್ತಿತರ ಕಡೆಗಳಲ್ಲಿ ಹಾಗೂ ಪ್ಯಾರಡೈಸ್ ಬೀಚ್​ನಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ಆಯೋಜಿತವಾಯಿತು.

ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಇಲ್ಲಿನ ಆಯ್ದ 40 ಸ್ಥಳಗಳಲ್ಲಿ ಈ ಪರಿಶೋಧನೆ ನಡೆಯಿತು.

ಕಾರ್ಯಾಚರಣೆಯ ಬಗ್ಗೆ ಸ್ಥಳೀಯ ಪೊಲೀಸ್ ಇನ್​ಸ್ಪೆಕ್ಟರ್ ಶ್ರೀಧರ ಎಸ್.ಆರ್. ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠ ಎಂ.ನಾರಾಯಣ ಅವರ ಆದೇಶ ಮತ್ತು ಮಾರ್ಗದರ್ಶನ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನದಡಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಿಂದ ಇಂತಹ ವಿಧ್ವಂಸಕ ಕೃತ್ಯದ ವಿರುದ್ಧ ಸಾರ್ವಜನಿಕ ಜಾಗೃತಿ ಮತ್ತು ಮಾದಕ ದ್ರವ್ಯ ನಿಯಂತ್ರಣಕ್ಕೆ ಮುಂದಾಗಲಾಗಿದೆ.

ಕಳೆದ ಎರಡು ತಿಂಗಳಲ್ಲಿ ಗೋಕರ್ಣದ ವಿವಿಧೆಡೆಗಳಲ್ಲಿ ಮಾದಕ ದ್ರವ್ಯ ಸೇವನೆ ಸಂಬಂಧ 12 ಪ್ರಕರಣಗಳನ್ನು ದಾಖಲಿಸಲಾಗಿದೆ. ಸರ್ಕಾರ ಆಯೋಜಿಸಿರುವ ‘ನಶೆ ಮುಕ್ತ ಕರ್ನಾಟಕ’ ಅಭಿಯಾನದಲ್ಲಿ ಪಾಲ್ಗೊಂಡು ಪೊಲೀಸರ ಜೊತೆ ಮಾಹಿತಿ ಹಂಚಿಕೊಳ್ಳ ಬಯಸುವವರು ಈ ಕುರಿತಾದ ಏಪ್ ಮೂಲಕ ನಮ್ಮನ್ನು ಸಂರ್ಪಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಿಎಸ್​ಐ ಖಾದರ್ ಬಾಷಾ, ಪಿಎಸ್​ಐ ಶಶಿಧರ ಮತ್ತು ಹೆಚ್ಚಿನ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net