ವಿಶೇಷ ಒಲಿಂಪಿಕ್ಸ್‌ನಲ್ಲಿ ಸಾಧನೆಗೆ ಸಿದ್ಧತೆ

5BGV-Chikodi1
ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಶಶಿಕಲಾ ಜೊಲ್ಲೆ ಮಾತನಾಡಿದರು. ಅಮರೇಂದರ್, ಖಜಾಂಚಿ ಡಿ.ಸಿ.ಆನಂದ, ತಜ್ಞೆ ಶಾಂತಲಾ ಭಟ್ ಇದ್ದರು.
Published on

ಚಿಕ್ಕೋಡಿ ಗ್ರಾಮೀಣ: ಆಸ್ಟ್ರೇಲಿಯಾದಲ್ಲಿ ಜರುಗಲಿರುವ 2027ರ ವಿಶೇಷ ಒಲಿಂಪಿಕ್ಸ್‌ಗೆ ರಾಜ್ಯದಿಂದ ಹೆಚ್ಚಿನ ಸಂಖ್ಯೆಯ ಮಕ್ಕಳು ಭಾಗವಹಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ ಎಂದು ಭಾರತ ವಿಶೇಷ ಒಲಿಂಪಿಕ್ಸ್-ಕರ್ನಾಟಕ ಅಧ್ಯಕ್ಷೆ ಶಶಿಕಲಾ ಜೊಲ್ಲೆ ಹೇಳಿದರು.

ಯಕ್ಸಂಬಾ ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ 31 ಜಿಲ್ಲೆಗಳಲ್ಲಿ ಅಂಗವಿಕಲ ಮಕ್ಕಳ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ಆಯಾ ವಸತಿ ಶಾಲೆಯಲ್ಲಿ ತರಬೇತಿ ಪಡೆದ ಶಿಕ್ಷಕರು ಮಕ್ಕಳನ್ನು ತರಬೇತುಗೊಳಿಸುತ್ತಿದ್ದಾರೆ. ಈಗಾಗಲೇ 1ನೇ ಹಂತವಾಗಿ ಮಂಡ್ಯದಲ್ಲಿ ಜ. 31 ಹಾಗೂ ಫೆ. 1ರಂದು ಹ್ಯಾಂಡ್ ಬಾಲ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್, ಟೆನ್ನಿಸ್ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು.

30 ಶಾಲೆಗಳಿಂದ 300 ಅಂಗವಿಕಲ ಮಕ್ಕಳು ಭಾಗವಹಿಸಿದ್ದರು. 2ನೇ ಹಂತದಲ್ಲಿ ಸೈಕ್ಲಿಂಗ್, ವಾಲಿಬಾಲ್, ಫುಟ್ಬಾಲ್, ಸ್ಕೇಟಿಂಗ್, ಜೂಡೋ, ಗಾಲ್ಫ್ ಕ್ರೀಡೆಗಳನ್ನು ಚಿಕ್ಕೋಡಿಯ ಯಕ್ಸಂಬಾ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿತ್ತು. 24 ಶಾಲೆಗಳ 182 ಅಂಗವಿಕಲ ಮಕ್ಕಳು ಭಾಗವಹಿಸಿದ್ದರು. ಇಲ್ಲಿ ಆಯ್ಕೆಯಾದ ಮಕ್ಕಳು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ಮಕ್ಕಳು 2027ರಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಲಿರುವ ವಿಶೇಷ ಒಲಿಂಪಿಕ್ಸ್‌ನಲ್ಲಿ ಆಡಲು ಅರ್ಹತೆ ಪಡೆದುಕೊಳ್ಳುತ್ತಾರೆ ಎಂದು ಹೇಳಿದರು. ದೆಹಲಿಯಲ್ಲಿ ಜೂಡೋ, ಗುಜರಾತ್‌ನಲ್ಲಿ ವಾಲಿಬಾಲ್, ಉತ್ತರಪ್ರದೇಶದಲ್ಲಿ ಪವರ್ ಲಿಫ್ಟಿಂಗ್, ಹರಿಯಾಣದಲ್ಲಿ ಗಾಲ್ಫ್, ಚಂಡೀಗಢದಲ್ಲಿ ಬಾಲಕರಿಗಾಗಿ ಟೇಬಲ್ ಟೆನ್ನಿಸ್, ಪಂಜಾಬ್‌ನಲ್ಲಿ ಬಾಲಕಿಯರಿಗಾಗಿ ಟೇಬಲ್ ಟೆನ್ನಿಸ್, ಆಸ್ಸಾಂನಲ್ಲಿ ಬ್ಯಾಡ್ಮಿಂಟನ್, ದೆಹಲಿಯಲ್ಲಿ ಟೆನ್ನಿಸ್ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಭಾರತ ವಿಶೇಷ ಒಲಿಂಪಿಕ್ಸ್-ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಅಮರೇಂದರ್, ಖಜಾಂಚಿ ಡಿ.ಸಿ.ಆನಂದ, ತಜ್ಞೆ ಶಾಂತಲಾ ಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net