ಸಾಧನೆಗೆ ಸತತ ಪ್ರಯತ್ನ ಅತ್ಯಗತ್ಯ: ಲಿಡ್ಕರ್ ಎಂಡಿ ಡಾ.ಕೆ.ಎಂ.ವಸುಂಧರಾ ಕಿವಿಮಾತು

Special lecture programme Mandya
Published on

ಮಂಡ್ಯ: ಸೋಲು, ಗೆಲುವು ನಂತರದ ಪ್ರಶ್ನೆ. ಆದರೆ ಸಾಧನೆಗೆ ಸತತ ಪ್ರಯತ್ನ ಮಾಡಬೇಕು ಎಂದು ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ(ಲಿಡ್ಕರ್)ದ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಸಲಹೆ ನೀಡಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿ(ಸ್ವಾಯತ್ತ)ನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಆತ್ಮವಿಶ್ವಾಸ ಬೆಳೆಸಿಕೊಳ್ಳುವ’ ವಿಷಯದ ಬಗ್ಗೆ ಮಾತನಾಡಿದ ಅವರು, ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಸಾಧನೆ ಮಾಡುವುದು ಕಷ್ಟ ಎಂದರು.

ಪ್ರಾಥಮಿಕ ಶಾಲಾ ಹಂತದಲ್ಲಿ ನಾನು ತೆಗೆದುಕೊಂಡ ನಿರ್ಧಾರ ನನ್ನ ಇಡೀ ಜೀವನದ ಆತ್ಮವಿಶ್ವಾಸವನ್ನು ವೃದ್ಧಿಸಿತು. ಹಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನನ್ನನ್ನು ಮಂಡ್ಯ ನಗರದ ಆಂಗ್ಲ ಮಾಧ್ಯಮದ ಶಾಲೆಗೆ ಸೇರಿಸಿದರು. ಆ ಸಮಯದಲ್ಲಿ ಕೊಂಚ ವಿಚಲಿತಳಾಗಿದ್ದೆ. ಆದರೆ ಎಂದಿಗೂ ಎದೆಗುಂದಲಿಲ್ಲ. ಈ ನಡುವೆ ಪ್ರಬಂಧ, ಚರ್ಚಾ ಸ್ಪರ್ಧೆ ಆಯೋಜನೆಗೊಂಡಿತ್ತು. ನಮ್ಮ ಶಾಲೆಯಿಂದ ನಾನು ಕೂಡ ಭಾಗವಹಿಸಲು ಮುಂದಾದೆ. ಆ ವೇಳೆ ಈಕೆ ಗೆಲ್ಲುತ್ತಾಳಾ ಎಂದು ಬಹುತೇಕರು ಮಾತನಾಡಿದ್ದರು. ಈ ಎಲ್ಲವನ್ನೂ ಮೀರಿ ಸ್ಪರ್ಧೆಯಲ್ಲಿ ಗೆದ್ದು 75 ರೂ ನಗದು ಬಹುಮಾನ ಪಡೆದಿದ್ದೆ. ಆ ಘಟನೆ ನನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಇದಾದ ಬಳಿಕ ಹಲವು ಸ್ಪರ್ಧೆಯಲ್ಲಿ ಬಹುಮಾನ ಗಳಿಸಿಕೊಂಡೆ. ಹಿಂದಿ ಭಾಷೆಯ ಅರಿವಿಲ್ಲದ ನಾನು, ಅದನ್ನು ಕಲಿಯಬೇಕೆನ್ನುವ ಸವಾಲು ಹಾಕಿಕೊಂಡೆ. ಪರಿಣಾಮ ಎಸ್ಸೆಸ್ಸೆಲ್ಸಿಯಲ್ಲಿ 82 ಅಂಕ ಗಳಿಸಿದೆ. ಆದಾಗ್ಯೂ ನನ್ನ ನೆಚ್ಚಿನ ಹಾಗೂ ಮೆಚ್ಚಿನ ಭಾಷೆ ಕನ್ನಡ. ಯಾವುದೇ ಸ್ಪರ್ಧೆಯಾಗಲಿ ಮೊದಲ ಸ್ಪರ್ಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನನಗೆ ಕ್ರೀಡೆ, ಗಾಯನ ಗೊತ್ತಿರಲಿಲ್ಲ. ಆದರೂ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ. ಇದಕ್ಕೆ ಕಾರಣ ಆತ್ಮವಿಶ್ವಾಸ. ವಿದ್ಯಾರ್ಥಿಗಳು ಇದನ್ನು ಬೆಳೆಸಿಕೊಳ್ಳಬೇಕ ಎಂದು ಕಿವಿಮಾತು ಹೇಳಿದರು.

‘ಭ್ರಷ್ಟಾಚಾರ ತಡೆಯುವಲ್ಲಿ ಮಹಿಳೆಯರ ಪಾತ್ರ’ ಕುರಿತು ಉಪನ್ಯಾಸ ನೀಡಿದ ರಾಮನಗರ ಜಿಲ್ಲೆ ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹಾ, ಮನುಷ್ಯರಲ್ಲಿರುವ ಅತಿ ಆಸೆಯಿಂದಾಗಿ ಭ್ರಷ್ಟಾಚಾರ ಹುಟ್ಟಿಕೊಂಡಿದೆ. ಆಸೆಗಳನ್ನು ಹತ್ತಿಕ್ಕದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಹೆಣ್ಣು ಮಕ್ಕಳಾಗಿ ಆರ್ಥಿಕ ಶಿಸ್ತನ್ನು ಕಲಿತುಕೊಳ್ಳುವುದು ಅತ್ಯಾವಶ್ಯಕ. ಇಲ್ಲದಿದ್ದರೆ ಹಣವನ್ನು ಉಳಿತಾಯ ಮಾಡಲಾಗದು ಎಂದು ಹೇಳಿದರು.

ನಮ್ಮ ಪಾಲಕರು ಎಷ್ಟು ಸಂಪಾದನೆ ಮಾಡುತ್ತಿದ್ದರು. ಎಷ್ಟು ಖರ್ಚು ಮಾಡಿ, ಅದರಲ್ಲಿ ಎಷ್ಟು ಹಣ ಉಳಿಸುತ್ತಿದ್ದರು. ಇದರೊಂದಿಗೆ ಬದುಕನ್ನೂ ಕಟ್ಟಿಕೊಂಡು ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಆದರೆ ಈಗ ಅತಿ ಆಸೆಗೆ ಬಿದ್ದು, ಏನೆಲ್ಲ ಮಾಡುತ್ತಿದ್ದಾರೆ ಎಂಬುದನ್ನೂ ಅರಿತುಕೊಳ್ಳಬೇಕು. ಸರ್ಕಾರಿ ನೌಕರ ಅಥವಾ ಅಧಿಕಾರಿಯಾಗಿರಬಹುದು. ನಮಗೆ ಬರುವ ಸಂಬಳದಲ್ಲೇ ಜೀವನ ಕಟ್ಟಿಕೊಳ್ಳಬೇಕು. ಅದು ಬಿಟ್ಟು ಹೆಚ್ಚಿನ ಆಸೆಗೆ ಬಿದ್ದರೆ ಬೇರೆ ಮೂಲಕ್ಕೆ ಕೈ ಹಾಕಬೇಕಾಗುತ್ತದೆ. ಹಣ ಸಮುದ್ರದ ನೀರಿದ್ದಂತೆ. ಕುಡಿದಷ್ಟೂ ದಾಹ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ಎಚ್ಚರಿಸಿದರು.

ನಾವೆಲ್ಲ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪುಸ್ತಕಗಳನ್ನು ಓದುತ್ತಿದ್ದವು. ಅದರಿಂದ ನಮಗೆ ಬಹಳಷ್ಟು ಉಪಯೋಗವಾಗಿದೆ. ಆದರೆ ಇಂದು ಮೊಬೈಲ್‌ನಿಂದಾಗಿ ಒಳ್ಳೆಯದ್ದನ್ನೂ ಕಲಿಯಬಹುದು. ಜತೆಗೆ ಕೆಟ್ಟದ್ದನ್ನೂ ಪಡೆದುಕೊಳ್ಳಬಹುದು. ಆದರೆ, ಆಯ್ಕೆ ನಮ್ಮದಾಗಿರುತ್ತದೆ, ಹಳ್ಳಿಯಾಗಲೀ, ನಗರವಾಸಿಯಾಗಿರಲಿ ನಮ್ಮ ಸುತ್ತಮುತ್ತಲ ಏನೆಲ್ಲ ನಡೆಯುತ್ತಿದೆ. ಸರ್ಕಾರಿ ನೌಕರ, ಅಧಿಕಾರಿಗಳಿದ್ದರೆ ಅವರ ಕರ್ತವ್ಯಗಳೇನು ಎಂಬುದನ್ನು ಅರಿತುಕೊಳ್ಳಬೇಕು. ಲಂಚ ಕೊಟ್ಟು ಕೆಲಸ ಮಾಡಿಸುವ ಸ್ಥಿತಿಗೆ ಇಳಿಯಬಾರದು. ಲಂಚ ಕೇಳಿದರೆ ಅದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಥವಾ ಬೇರೆ ಬೇರೆ ಸಂಸ್ಥೆಗಳಿಗೆ ದೂರು ಕೊಡಬಹುದು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಜೀವನ ಸುಂದರವಾದದ್ದು. ಅದನ್ನು ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಿಕೊಳ್ಳಬಹುದು. ಇಂದು ಮೊಬೈಲ್‌ನಲ್ಲಿ ಎಲ್ಲವನ್ನೂ ಕಲಿಯಬಹುದು. ಆದರೆ ಇಂದಿನ ಯುವಜನತೆ ರೀಲ್ಸ್‌ಗೆ ಮರಳುತ್ತಾರೆ. ರೀಲ್ಸ್ ಮಾಡುವುದು, ನೋಡುವುದರಿಂದ ಸಮಯ ವ್ಯರ್ಥವಾಗುತ್ತದೆಯೇ ಹೊರತು ಅದರಿಂದ ಜ್ಞಾನ ಬೆಳೆಯುವುದಿಲ್ಲ. ಮೊದಲು ನಾವು ನಿಯಮಗಳನ್ನು ಪಾಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಾವೇ ನಿಯಮಗಳನ್ನು ಪಾಲಿಸದಿದ್ದರೆ ಬೇರೆಯವರಿಗೆ ಏನೆಂದು ಹೇಳಲು ಸಾಧ್ಯ. ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸುವುದರ ಜೊತೆಗೆ ಕೌಶಲವನ್ನು ಬೆಳೆಸಿಕೊಂಡು ಬೇರೆಯವರಿಗಿಂತ ಭಿನ್ನವಾಗಿ ಸಂವಹನವನ್ನೂ ಕಲಿಯಬೇಕು. ಆಗ ಎಲ್ಲವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗುರುರಾಜಪ್ರಭು, ನಗರಸಭೆ ಮಾಜಿ ಸದಸ್ಯೆ ನಾಗರೇವಕ್ಕ, ರುಸಾ ಸಂಯೋಜಕಿ ಡಾ.ಕೆ.ಎಂ.ಮಂಗಳಮ್ಮ, ಕೆ.ವಿ.ಶಂಕರಗೌಡ ಬಿಇಡಿ ಕಾಲೇಜಿನ ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ, ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಬಿ.ಪ್ರಮೀಳಾ, ಡಾ.ಬಿ.ಕೋಮಲಾ, ಡಾ.ವೈ.ಕೆ.ಭಾಗ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net