

ಬಸವಕಲ್ಯಾಣ: ಸಾಹಿತ್ಯದ ಓದು ಮನುಷ್ಯನನ್ನು ಪರಿಪೂರ್ಣನನ್ನಾಗಿಸುವುದರ ಜತೆಗೆ ಉದ್ಯೋಗಮುಖಿಯಾಗಿಯೂ ಬೆಳೆಸುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಹೇಳಿದರು.
ನಗರದ ಎಸ್‌ಎಸ್‌ಕೆ ಬಸವೇಶ್ವರ ಮಹಾವಿದ್ಯಾಲಯದ ಕನ್ನಡ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯದ ಓದು ಮತ್ತು ಉದ್ಯೋಗಾವಕಾಶಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಮಕಾಲೀನ ಜಾಗತೀಕರಣ ಮತ್ತು ಕಂಪ್ಯೂಟರ್ ತಂತ್ರಜ್ಞಾನದ ಯುಗದಲ್ಲೂ ಕನ್ನಡ ಸಾಹಿತ್ಯದ ಓದಿನಿಂದ ಉದ್ಯೋಗಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಇಂದಿನ ಎಸ್‌ಡಿಎ, ಎಫ್‌ಡಿಎ ಹಾಗೂ ಕೆಎಎಸ್ ಪರೀಕ್ಷೆಗಳಲ್ಲಿ ಕಡ್ಡಾಯ ಕನ್ನಡ ಪತ್ರಿಕೆಯನ್ನು ಪಾಸು ಮಾಡಲೇಬೇಕಾಗುತ್ತದೆ. ಅದಕ್ಕಾಗಿ ಕನ್ನಡ ಸಾಹಿತ್ಯ ಮತ್ತು ಭಾಷಾ ಜ್ಞಾನದ ಅರಿವು ಅಗತ್ಯವಾಗಿರುತ್ತದೆ. ಇಂದು ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನೂ ಕನ್ನಡ ಮಾಧ್ಯಮದಲ್ಲಿ ಬರೆಯಬಹುದಲ್ಲದೆ, ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿಯೂ ಪಡೆಯಬಹುದಾಗಿದೆ ಎಂದರು.
ಪದವಿಯಲ್ಲಿ ಐಚ್ಛಿಕ ಕನ್ನಡವನ್ನು ಮುಖ್ಯ ವಿಷಯವಾಗಿ ಓದುವುದರಿಂದ ಬಿಇಡಿ ಪದವಿಯನ್ನು ಪಡೆದು ಪ್ರೌಢಶಾಲಾ ಕನ್ನಡ ಶಿಕ್ಷಕರಾಗಬಹುದು. ಇಲ್ಲವೆ ಎಂಎ ಕನ್ನಡವನ್ನು ಆಯ್ಕೆ ಮಾಡಿಕೊಂಡು ಸ್ನಾತಕೋತ್ತರ ಪದವಿ ಪಡೆದು ಮುಂದೆ ಪಿಎಚ್.ಡಿ ಸಂಶೋಧನೆ ಕೈಕೊಳ್ಳಬಹುದಾಗಿದೆ. ಇದರಿಂದ ಪದವಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ ಪಡೆಯಬಹುದಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ಬಸವರಾಜ ಎವಲೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ವಿಠೋಬಾ ಡೊಣ್ಣೆಗೌಡ ಹಾಗೂ ಐಚ್ಛಿಕ ಕನ್ನಡ ಪದವಿ ತರಗತಿಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.