ಎಣ್ಣೆ ಇಲ್ಲದೆ ಉರಿಯುತ್ತಿದ್ದ ದೀಪಗಳು ಶಾಂತ

5mnd2.a
Published on

ಮುಂಡಗೋಡ:  ದೇಶದಾದ್ಯಂತ ಪ್ರಖ್ಯಾತಿ ಗಳಿಸಿ ಪ್ರವಾಸಿ ತಾಣವಾಗಿದ್ದ ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಸ್ಥಾನದಲ್ಲಿ ಹಲವು ದಶಕಗಳಿಂದ ಎಣ್ಣೆ ಇಲ್ಲದೆ ಉರಿಯುತ್ತಿದ್ದ ಮೂರು ದೀಪಗಳು ಆರಿರುವ ಘಟನೆ ಬುಧವಾರ ಜರುಗಿದೆ.

ದೇವತಾನುಗ್ರಹದಿಂದ ಮೂರು ದೀಪಗಳು ಯಾವುದೇ ಎಣ್ಣೆ ಹಾಗೂ ಬತ್ತಿ ಇಲ್ಲದೆ ಕಳೆದ 45 ವರ್ಷಗಳಿಂದ ಉರಿಯುತ್ತ ಬಂದಿದ್ದವು. ಈ ದೀಪಗಳು ದೇಶ ಹಾಗೂ ವಿದೇಶಗಳಲ್ಲಿ ಹೆಸರು ಗಳಿಸಿದ್ದು ಪ್ರತಿದಿನವೂ ಸಾಕಷ್ಟು ಜನರು ದೀಪಗಳ ವೀಕ್ಷಣೆಗೆ ಆಗಮಿಸುತ್ತಾರೆ.

1979ರಲ್ಲಿ ಚಿಗಳ್ಳಿ ಗ್ರಾಮದ ಶಾರದಮ್ಮ ದೈವಜ್ಞ ಎಂಬವರು ಸೀಮೆ ಎಣ್ಣೆ ಹಾಕಿ ಒಂದು ಲಾಟೀನ್ ದೀಪ ಹಚ್ಚಿದ್ದರು. ಅದು ನಿರಂತರವಾಗಿ ಉರಿಯತೊಡಗಿತು. ಅದನ್ನು ಕಂಡು ಆಶ್ಚರ್ಯಗೊಂಡಿದ್ದ ಶಾರದಮ್ಮ 1980ರಲ್ಲಿ ಮತ್ತೊಂದು ದೀಪ ಹಚ್ಚಿದರು. ಅದು ಕೂಡ ನಿರಂತರ ಬೆಳಗತೊಡಗಿತು. ಹದಿನೈದು ದಿನ ಬಿಟ್ಟು ಅವರು ಹಚ್ಚಿದ ಇನ್ನೊಂದು ದೀಪವೂ ಪವಾಡವೆಂಬಂತೆ ನಿರಂತರವಾಗಿ ಬೆಳಗುತ್ತ ಬಂದಿತ್ತು. ದೀಪಗಳನ್ನು ಹಚ್ಚಿದ ಶಾರದಮ್ಮ ಹಲವು ವರ್ಷಗಳ ನಂತರ ನಿಧನ ಹೊಂದಿದರು. ಅವರ ಸಂಬಂಧಿಕರು ಈ ದೀಪಗಳನ್ನು ಪೂಜಿಸುತ್ತ ಬಂದಿದ್ದಾರೆ.

ಗ್ರಾಮಸ್ಥರ ಸಹಾಯ ಹಾಗೂ ಸರ್ಕಾರದ ಅನುದಾನದಲ್ಲಿ ನೂತನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಹಾಗೂ ವಿವಿಧೆಡೆಯಿಂದ ಪ್ರವಾಸಿಗರು ಈ ದೀಪಗಳ ವೀಕ್ಷಣೆಗೆ ಆಗಮಿಸುತ್ತಾರೆ.

ಆರಿದ ದೀಪಗಳು:

ಬುಧವಾರ ಮೂರೂ ದೀಪಗಳು ಆರಿರುವ ಸುದ್ದಿ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಯಾವ ಕಾರಣಕ್ಕಾಗಿ ಈ ದೀಪಗಳು ಆರಿದವು ಎಂಬುದು ತಿಳಿಯದಾಗಿದೆ.

ವಿಷಯ ತಿಳಿದ ಸ್ಥಳೀಯರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಆದರೆ, ದೇವಸ್ಥಾನದ ಪೂಜೆ ಮಾಡಿಕೊಂಡಿದ್ದ ಕುಟುಂಬದವರು (ಬೇಸರದಿಂದ) ಗುಡಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.

ಹಲವು ದಶಕಗಳಿಂದ ಎಣ್ಣೆ ಇಲ್ಲದೆ ಬೆಳಗುತ್ತಿದ್ದ ಮೂರು ದೀಪಗಳು ಆರಿರುವುದು ಸಾರ್ವಜನಿಕರಿಗೆ ತೀವ್ರ ಬೇಸರ ಉಂಟು ಮಾಡಿದೆ.

ಸ್ಥಳೀಯ ಕೆಲ ಹಿರಿಯರು ಹಾಗೂ ದೇವಸ್ಥಾನ ಪೂಜೆ ಮಾಡುವವರು ಗುರು ಹಿರಿಯರಲ್ಲಿ ಹೋಮ-ಹವನ ಮಾಡಿಸಿದರೆ ಮರಳಿ ದೀಪಗಳು ಬೆಳಗಬಹುದು, ಅದೊಂದು ಪ್ರಯತ್ನ ಮಾಡಿ ನೋಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net